ಕೊಡಗು ಜಿಲ್ಲೆಯಿಂದ ಹೊರ ರಾಜ್ಯಗಳಿಗೆ, ಹೊರ ರಾಜ್ಯಗಳಿಂದ ಕೊಡಗಿಗೆ ತೆರಳುವವರಿಗಾಗಿ ಮಾರ್ಗಸೂಚಿ

Update: 2020-05-02 18:09 GMT
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್

ಮಡಿಕೇರಿ ಮೇ.2: ಜಿಲ್ಲೆಗೆ ಹಿಂತಿರುಗುವವರು ಗುರುತಿನ ಚೀಟಿ ಮತ್ತು ಕೊಡಗು ಜಿಲ್ಲೆಯಲ್ಲಿರುವವರು ಎಂಬ ಬಗ್ಗೆ ವಾಸ ಧೃಢೀಕರಣ ಪತ್ರವನ್ನು ಜೊತೆಯಲ್ಲಿ ಇರಿಸಿಕೊಳ್ಳತಕ್ಕದ್ದು (ಸರ್ಕಾರ ನೀಡಿರುವ ಭಾವಚಿತ್ರವಿರುವ ಯಾವುದಾದರು ಗುರುತಿನ ಚೀಟಿ). ಜಿಲ್ಲೆಗೆ ಹಿಂತಿರುಗುವವರಿಗಾಗಿ ಮೈಸೂರು-ಕೊಡಗು ಜಿಲ್ಲೆ ಗಡಿಭಾಗದ ಕೊಪ್ಪ ಚೆಕ್‍ಪೋಸ್ಟ್ ಮುಖಾಂತರ ಆಗಮಿಸುವ ಮಾರ್ಗವನ್ನು ನಿಗಧಿಪಡಿಸಲಾಗಿದ್ದು, ಬೇರೆ ಯಾವುದೇ ಬದಲಿ ಮಾರ್ಗ ಇರುವುದಿಲ್ಲ.

ಜಿಲ್ಲೆಗೆ ಹಿಂತಿರುಗುವವರನ್ನು ಈ ಚೆಕ್‍ಪೋಸ್ಟ್‍ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಈ ಕಾರ್ಯದ ಮೇಲುಸ್ತುವಾರಿಯನ್ನು ತಹಶೀಲ್ದಾರ್, ಸೋಮವಾರಪೇಟೆ ಇವರು ನಿರ್ವಹಿಸಲಿದ್ದಾರೆ. ಚೆಕ್‍ಪೋಸ್ಟ್ ನಲ್ಲಿ ದಾಖಲಾತಿಗಳ ವಿವರವಾದ ಪರಿಶೀಲನೆ, ವೈದ್ಯಕೀಯ ತಪಾಸಣೆ ಮತ್ತು ನೋಂದಣಿ ಕಾರ್ಯವನ್ನು ಕಡ್ಡಾಯವಾಗಿ ನಡೆಸಿ ಸಂಪರ್ಕ ತಡೆ ಮೊಹರನ್ನು ಹಚ್ಚಲಾಗುವುದು.

ವೈದ್ಯಕೀಯ ವರದಿಯ ಆಧಾರದ ಮೇಲೆ ಎಲ್ಲಾ ಆಗಮಿತರನ್ನು 14 ದಿನಗಳ ಗೃಹ ಸಂಪರ್ಕ ತಡೆಯಲ್ಲಿ ಅಥವಾ ಸರ್ಕಾರಿ ಸಂಪರ್ಕ ತಡೆಯಲ್ಲಿ ಇರಿಸಲಾಗುವುದು. ಜಿಲ್ಲೆಗೆ ಆಗಮಿಸಿದವರನ್ನು ಕಡ್ಡಾಯವಾಗಿ ಸಂಪರ್ಕ ತಡೆಯಲ್ಲಿರಿಸುವ ಜವಾಬ್ದಾರಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ/ ಪಟ್ಟಣ ಪಂಚಾಯಿತಿ ಮತ್ತು ನಗರಸಭೆಯದ್ದಾಗಿದೆ.

ಕಾಲ ಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸುವುದು. ಯಾರೇ ವ್ಯಕ್ತಿ ರಾಜ್ಯದೊಳಗಿನ ಇತರೆ ಜಿಲ್ಲೆಗಳಿಂದ (ಉದಾ: ಬೆಂಗಳೂರು, ಮೈಸೂರು ಮತ್ತಿತರ) ಹಿಂತಿರುಗುವುದಿದ್ದಲ್ಲಿ ಆನ್‍ಲೈನ್ ನೋಂದಣಿ ನಡೆಸುವ ಅಗತ್ಯತೆ ಇರುವುದಿಲ್ಲ. ಬದಲಾಗಿ ಅವರು ಅಥವಾ ಅವರ ಕುಟುಂಬ ಸದಸ್ಯರು ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆಗೆ ಸಲ್ಲಿಸುವುದು. ರಾಜ್ಯ ಸರ್ಕಾರದ ಅಂತರ್ ಜಿಲ್ಲಾ ಸಂಚಾರದ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಿದ ನಂತರ ಸಂಬಂಧಪಟ್ಟ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ ಸಂಪರ್ಕಿಸಬಹುದಾಗಿದೆ.

ಜಿಲ್ಲೆಗೆ ಆಗಮಿಸುವವರ ಸಂಚಾರದ ವಿಚಾರವಾಗಿ ಉಪ ನಿರ್ದೇಶಕರು, ಕೃಷಿ ಇಲಾಖೆ ಇವರನ್ನು ನೋಡಲ್ ಅಧಿಕಾರಿಯವರನ್ನಾಗಿ ನೇಮಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕಂಟ್ರೋಲ್ ರೂಂ 1077 ಅಥವಾ ವಾಟ್ಸಪ್ ಸಂಖ್ಯೆ 8550001077ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತೆರಳುವವರಿಗಾಗಿ ಮಾರ್ಗಸೂಚಿ

ಕಾರ್ಮಿಕರು ತಮ್ಮ ಅರ್ಜಿಯನ್ನು ಅಂತರ್ಜಾಲ ಪುಟ https://sevasindhu.karnataka.gov.in ನಲ್ಲಿ ಸಲ್ಲಿಸಬೇಕಿದೆ. ಯಾರೇ ಅರ್ಜಿದಾರರು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ, ಸಂಬಂಧಪಟ್ಟ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರ ಸಭೆಯನ್ನು ಸಂಪರ್ಕಿಸಿದಲ್ಲಿ ಉಚಿತ ರೂಪದಲ್ಲಿ ತಮ್ಮ ಅರ್ಜಿಯನ್ನು ನೋಂದಾಯಿಸಲಾಗುವುದು.

ಸ್ವೀಕರಿಸಿದ ಎಲ್ಲಾ ಅರ್ಜಿಗಳಿಗೆ ಪ್ರತ್ಯೇಕವಾದ ನೋಂದಣಿ ಸಂಖ್ಯೆ ಲಭ್ಯವಾಗಲಿದ್ದು, ಈ ಸಂಖ್ಯೆ ಮಾಹಿತಿಗೆ ಮತ್ತು ಮುಂದಿನ ವ್ಯವಹಾರಗಳಿಗೆ ಅನುಕೂಲಕರವಾಗಿದೆ. ಅರ್ಜಿ ನೋಂದಣಿಯಾದ ಬಳಿಕ ಸಂಬಂಧಪಟ್ಟ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ ವತಿಯಿಂದ ಸಮೀಪದ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಧೃಢೀಕರಣ ಒದಗಿಸಲಾಗುತ್ತದೆ.

ಸರ್ಕಾರದ ಅನುಮತಿ ದೊರೆತ ನಂತರ ಜಿಲ್ಲಾಡಳಿತದ ವತಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಮುಖಾಂತರ ಕಳುಹಿಸಿಕೊಡಲಾಗುತ್ತದೆ. ಪ್ರಯಾಣದ ವೆಚ್ಚವನ್ನು ಪ್ರಯಾಣಿಕರು ಭರಿಸಬೇಕಿದೆ. ಈ ಬಸ್‍ಗಳು ನಿಗಧಿತ ಚೆಕ್‍ಪೋಸ್ಟ್ ಆದ ಹಾಸನ ಜಿಲ್ಲಾ ಗಡಿಭಾಗವಾದ ಶಿರಂಗಾಲ ಚೆಕ್‍ಪೋಸ್ಟ್ ಮೂಲಕ ಮಾತ್ರ ಸಂಚರಿಸಲಿದ್ದು, ಯಾವುದೇ ಬದಲಿ ಮಾರ್ಗಗಳು ಇರುವುದಿಲ್ಲ.

ಎಲ್ಲಾ ವಿಚಾರಗಳಿಗಾಗಿ ಉಪ ವಿಭಾಗಾಧಿಕಾರಿ ಅವರನ್ನು ಘಟನಾ ನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದ್ದು, ರಾಜ್ಯ ನೋಡಲ್ ಅಧಿಕಾರಿಯವರ ಒಪ್ಪಿಗೆ ದೊರೆತ ನಂತರ ಈ ಅಧಿಕಾರಿಯವರು ಸಂಚಾರಕ್ಕೆ ಅನುಮತಿ ನೀಡುತ್ತಾರೆ. ಪ್ರಯಾಣಿಕರು ಸಂಚರಿಸುವ ವೇಳೆ ಗುರುತಿನ ಚೀಟಿ ಮತ್ತು ವಾಸ ಧೃಢೀಕರಣವನ್ನು ಜೊತೆಯಲ್ಲಿ ಇರಿಸಿಕೊಳ್ಳತಕ್ಕದ್ದು (ಸರ್ಕಾರ ನೀಡಿರುವ ಭಾಚಚಿತ್ರವಿರುವ ಯಾವುದಾದರು ಗುರುತಿನ ಚೀಟಿ).

ಯಾವುದೇ ವಲಸೆ ಕಾರ್ಮಿಕರು ರಾಜ್ಯದೊಳಗಿನ ಅವರ ಸ್ವಂತ ಸ್ಥಳಕ್ಕೆ ತೆರಳಲು ಇಚ್ಛಿಸಿದಲ್ಲಿ ಆನ್‍ಲೈನ್ ಮುಖಾಂತರ ನೋಂದಾಯಿಸುವ ಅಗತ್ಯತೆ ಇರುವುದಿಲ್ಲ. ಬದಲಾಗಿ ಕಾರ್ಮಿಕರ ವೈದ್ಯಕೀಯ ಧೃಢೀಕರಣದೊಂದಿಗೆ ಸಮೀಪದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆಗೆ ಸಂಬಂಧಪಟ್ಟ ಉದ್ಯೋಗದಾತರು, ಗುತ್ತಿಗೆದಾರರು, ಎಸ್ಟೇಟ್ ಮಾಲೀಕರು ಅರ್ಜಿ ಸಲ್ಲಿಸುವುದು ಮತ್ತು ಸ್ವ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡುವುದು.

ಹೆಚ್ಚಿನ ಮಾಹಿತಿಗೆ ಕಂಟ್ರೋಲ್ ರೂಂ 1077 ಅಥವಾ ವಾಟ್ಸಪ್ ಸಂಖ್ಯೆ 8550001077 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News