ಇಂಧನ ಕ್ಷಮತೆ ತೋರುವ ಚಾಲಕರಿಗೆ ಚಿನ್ನದ ಪದಕ ಪ್ರದಾನ: ಸಚಿವ ಲಕ್ಷ್ಮಣ ಸವದಿ

Update: 2020-05-02 18:16 GMT

ಬೆಂಗಳೂರು, ಮೇ 2: ಕೆಎಸ್ಸಾರ್ಟಿಸಿ, ಈಶಾನ್ಯ ಸಾರಿಗೆ ಸಂಸ್ಥೆ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರತಿ ತಿಂಗಳು ಅತಿಹೆಚ್ಚು ಇಂಧನ ಕ್ಷಮತೆ ತೋರುವ ಚಾಲಕನಿಗೆ 10 ಗ್ರಾಂ ಚಿನ್ನದ ಪದಕ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ 41 ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗಳ ಜತೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ಅವರು, ಎಲ್ಲ ಸಾರಿಗೆ ನಿಗಮಗಳಲ್ಲಿ ಅತಿಹೆಚ್ಚು ಇಂಧನ ಕ್ಷಮತೆ ತೋರುವ ಓರ್ವ ಚಾಲಕನಿಗೆ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಾರಿಗೆ ಇಲಾಖೆಯಿಂದ 10 ಗ್ರಾಂ ಚಿನ್ನದ ಪದಕ ನೀಡುವುದಾಗಿ ತಿಳಿಸಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಸಾರಿಗೆ ಸಂಸ್ಥೆಗಳು ಇಂದು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ. ನಾವೆಲ್ಲರೂ ಮುಂದಿನ ದಿನಗಳಲ್ಲಿ ತಂಡವಾಗಿ ಕರ್ತವ್ಯ ನಿರ್ವಹಿಸಿ, ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗಿರಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.

ಮೇ 3ಕ್ಕೆ ಲಾಕ್‍ಡೌನ್ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಮುಂದೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಗಮದ ಬಸ್ಸುಗಳನ್ನು ಗುತ್ತಿಗೆಗೆ ನೀಡಲು ಇಂದು ನಡೆದ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ ಎಂದರು. ಪ್ರತಿಯೊಬ್ಬ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಸಂಪರ್ಕಿಸಿ ಹಸಿರು, ಕೆಂಪು ವಲಯಗಳಲ್ಲಿ ಯಾವ ರೀತಿ ಬಸ್ ಕಾರ್ಯಾಚರಣೆ ಮಾಡಬೇಕು ಎಂಬುದರ ಬಗ್ಗೆ ಸಚಿವರು ಪರಾಮರ್ಶೆ ನಡೆಸಿದರು.

ಮುಂದಿನ ದಿನಗಳಲ್ಲಿ ಬಸ್ ಕಾರ್ಯಾಚರಣೆ ವ್ಯವಸ್ಥೆ ಹೇಗಿರಬೇಕು, ಸಾಮಾಜಿಕ ಅಂತರ ಕಾಪಾಡುವುದು, ಕಾರ್ಮಿಕರನ್ನು ಸ್ಥಳಾಂತರಿಸುವಾಗ ಹೆಚ್ಚಿನ ಕಾಳಜಿ ವಹಿಸುವುದು, ಬಸ್ ನಿಲ್ದಾಣಗಳಲ್ಲಿ ಸ್ಯಾನಿಟೈಜ್ ಮಾಡುವುದು, ಸಿಬ್ಬಂದಿ ಮಾಸ್ಕ್ ಕಡ್ಡಾಯ ಧರಿಸುವುದು, ಪೊಲೀಸ್ ಇಲಾಖೆ ಮತ್ತು ಸಮಾಜಕಲ್ಯಾಣ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಾರಿಗೆ ಸಂಸ್ಥೆಗಳು ಕಾರ್ಮಿಕರ ಸ್ಥಳಾಂತರ ಪ್ರಕ್ರಿಯೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News