ಮೇ 4ರಿಂದ ಚಿಕ್ಕಮಗಳೂರು ಜಿಲ್ಲೆಯೊಳಗೆ ಕೆಎಸ್ಸಾರ್ಟಿಸ್ ಬಸ್ ಸಂಚಾರ : ವೀರೇಶ್
ಚಿಕ್ಕಮಗಳೂರು, ಮೇ 3: ಜಿಲ್ಲೆ ಹಸಿರು ವಲಯದಲ್ಲಿರುವುದರಿಂದ ಹಲವು ನಿರ್ಬಂಧಗಳೊಂದಿಗೆ ಜಿಲ್ಲೆಯೊಳಗೆ ಮಾತ್ರ ಮೇ 4ರಿಂದ ಕೆಎಸ್ಸಾರ್ಟಿಸಿ ಸಾರಿಗೆ ಬಸ್‍ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ ಎಂದು ವಿಭಾಗ ನಿಯಂತ್ರಣಾಧಿಕಾರಿ ಎಚ್.ಟಿ. ವಿರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 4ರಿಂದ ಕೆಎಸ್ಸಾರ್ಟಿಸಿ ಬಸ್‍ಗಳು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಶೇ.50ರಷ್ಟು ಪ್ರಯಾಣಿಕರೊಂದಿಗೆ ಸಂಚಾರ ಆರಂಭಿಸಲಿವೆ. ಪ್ರಯಾಣಿಕರು ಅರ್ಧ ಗಂಟೆ ಮೊದಲು ಆಯಾ ವ್ಯಾಪ್ತಿಯ ಬಸ್ ನಿಲ್ದಾಣಗಳಿಗೆ ಬರಬೇಕು. ಪ್ರಯಾಣಿಕರು ತಮ್ಮೊಂದಿಗೆ ಗುರುತಿನ ಚೀಟಿ ತರುವುದು ಕಡ್ಡಾಯ ಎಂದ ಅವರು, ಬಸ್ ಪ್ರಯಾಣಿಕರು ನಿಲ್ದಾಣದಲ್ಲಿ ತಮ್ಮ ಊರು, ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ನೋಂದಾಯಿಸುವುದು ಕಡ್ಡಾಯ. ಪ್ರಯಾಣಿಕರನ್ನು ಹೊರತುಪಡಿಸಿ ಬೇರೆಯವರು ನಿಲ್ದಾಣದಲ್ಲಿ ನಿಲ್ಲಲು ಅವಕಾಶವಿರುವುದಿಲ್ಲ ಹಾಗೂ ಬಸ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ತಾಲೂಕು ಕೇಂದ್ರಗಳ ಮುಖ್ಯ ಬಸ್ ನಿಲ್ದಾಣದಿಂದ ಅಗತ್ಯವಿದ್ದರೆ ಗ್ರಾಮೀಣ ಪ್ರದೇಶಗಳಿಗೆ ಬಸ್‍ಸಂಚಾರಕ್ಕೆ ಅವಕಾಶ ನೀಡಲಾಗುವುದು. ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಮತ್ತು ಬಸ್‍ಗಳಲ್ಲಿ ಉಗುಳುವುದು, ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ನಿಲ್ದಾಣದಿಂದ ಹೊರಟ ಬಸ್ ಮುಂದಿನ ನಿಲ್ದಾಣದವರೆಗೂ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಬಸ್ ನಲ್ಲಿ ಹೋಗುವ ಪ್ರಯಾಣಿಕರಿಗೆ ನಿರ್ವಾಹಕರು ಸ್ಯಾನಿಟೈಸರ್ ನೀಡಲಿದ್ದಾರೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.