ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ 21 ಕೊರೋನ ಪ್ರಕರಣಗಳು ದೃಢ

Update: 2020-05-03 14:26 GMT
ಸಾಂದರ್ಭಿಕ ಚಿತ್ರ

ದಾವಣಗೆರೆ, ಎ.3: ಯಾವುದೇ ಕೊರೋನ ಸೋಂಕಿತರು ಪತ್ತೆಯಾಗದೇ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ದಾವಣಗೆರೆ ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲೇ ಆತಂಕಕಾರಿ ಸನ್ನಿವೇಶ ಸೃಷ್ಟಿಯಾಗಿದ್ದು, ಇಂದು (ರವಿವಾರ) ಒಂದೇ ದಿನ ಒಟ್ಟು 21 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಶುಕ್ರವಾರ 94 ಮಾದರಿ, ಶನಿವಾರ 72 ಮಾದರಿ, ರವಿವಾರ 164 ಮಾದರಿ ಸೇರಿ ಒಟ್ಟು 330 ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಅದರಲ್ಲಿ 37 ಪ್ರಕರಣಗಳ ವರದಿ ಬಂದಿದ್ದು, 21 ಪ್ರಕರಣಗಳು ಪಾಸಿಟಿವ್ ಎಂದು ವರದಿ ಬಂದಿದೆ. ಇನ್ನು 293 ಪ್ರಕರಣಗಳ ವರದಿ ಬರಬೇಕಿದೆ ಎಂದು ವಿವರಿಸಿದರು. 

ಬಳಿಕ ಸಂಸದ ಸಿದ್ದೇಶ್ವರ ಮಾತನಾಡಿ, ಕೋವಿಡ್ ಕಂಡು ಬಂದಿರುವ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿ, ಮುಂದೆ ಯಾವುದೇ ಪ್ರಕರಣ ಕಂಡು ಬರದಂತೆ ಕ್ರಮ ವಹಿಸಬೇಕು. ನಗರದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದು ನೋವಿನ ಸಂಗತಿ. ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಕಂಟೈನ್ಮಟ್ ಝೋನ್ ಪ್ರದೇಶಗಗಳಲ್ಲಿ ಜನರಿಗೆ ಅವಶ್ಯಕ ಸಾಮಾಗ್ರಿಗಳು ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಅದ್ದರಿಂದ ಜನರು ಯಾರೂ ಹೊರಗೆ ಬರಬಾರದು ಎಂದು ಮನವಿ ಮಾಡಿದರು. 

ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ದಾವಣಗೆರೆ ನಗರಕ್ಕೆ ಇಂತಹ ಕೆಟ್ಟ ಪರಿಸ್ಥಿತಿ ಬಂದಿರುವುದು ನೋವಿನ ಸಂಗತಿ, ಎಲ್ಲ ಸಮುದಾಯಗಳು ಸುರಕ್ಷಿತ ಅಂತರ ಕಾಪಾಡಿಕೊಂಡು ಕೊರೋನ ತೊಲಗಿಸಲು ಕ್ರಮ ವಹಿಸಬೇಕು. ಒಂದು ವೇಳೆ ಹೊರಗೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಒ ಪದ್ಮಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News