×
Ad

ನಿಸಾರ್ ಅಹ್ಮದ್ ನಿಧನಕ್ಕೆ ಬಿಎಸ್‌ವೈ, ಸಿದ್ದರಾಮಯ್ಯ, ದೇವೇಗೌಡ ಸೇರಿ ಗಣ್ಯರ ಕಂಬನಿ

Update: 2020-05-03 20:37 IST

ಬೆಂಗಳೂರು, ಮೇ. 3: ಹಿರಿಯ ಸಾಹಿತಿ, ಕವಿ ಕೆ.ಎಸ್.ನಿಸಾರ್ ಅಹ್ಮದ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಂಪುಟ ಸಚಿವರು ಸೇರಿದಂತೆ ಸಾಹಿತ್ಯ ಕ್ಷೇತ್ರದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಕನ್ನಡವನ್ನು ಶ್ರೀಮಂತಗೊಳಿಸಿದ್ದರು: ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದ ನಿಸಾರ್ ಅಹ್ಮದ್ ಅವರು, ನಿತ್ಯೋತ್ಸವ ಕವಿ ಎಂದೇ ಪ್ರಖ್ಯಾತಿ ಪಡೆದು ಕನ್ನಡಿಗರ ಮನೆಮಾತಾಗಿದ್ದರು. ಶಿವಮೊಗ್ಗದಲ್ಲಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು ಹಾಗೂ ಅವರು ತಮ್ಮೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಮರಿಸಿದ್ದಾರೆ.

2007ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜರಾಗಿದ್ದ ಅವರು, ಕನ್ನಡದ ಎಲ್ಲ ಪ್ರಕಾರಗಳನ್ನು ಶ್ರೀಮಂತಗೊಳಿಸಿದ್ದರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

ನಿಸಾರ್ ಅಹ್ಮದ್ ಅವರ ನಿಧನ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿಬಿದ್ದಂತಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕನ್ನಡದ ಹಿರಿಮೆ: 'ನಿತ್ಯೋತ್ಸವದ ಮೂಲಕ ಕನ್ನಡದ ಹಿರಿಮೆಯನ್ನು ಜಗತ್ತಿಗೆ ಸಾರಿದ ಕನ್ನಡದ ಹಿರಿಯ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಅವರ ನಿಧನ ಕನ್ನಡ ಸಾಹಿತ್ಯ ಲೋಕದ ಅಮೂಲ್ಯವಾದ ರತ್ನವೊಂದನ್ನು ಕಳೆದುಕೊಂಡಿದೆ. ಅಜಾತ ಶತ್ರುವಾಗಿದ್ದ ನಿಸಾರ್ ಅಹ್ಮದ್ ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಬಂಧು-ಮಿತ್ರರಿಗೆ ಈ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ' ಎಂದು ಮಾಜಿ ಪ್ರಧಾನಿ ದೇವೇಗೌಡ ಕಂಬನಿ ಮಿಡಿದಿದ್ದಾರೆ.

ಸಾರಸ್ವತ ಲೋಕದ ದಿಗ್ಗಜ: ಕನ್ನಡ ಸಾರಸ್ವತ ಲೋಕದ ದಿಗ್ಗಜ, ನಮ್ಮ ನಾಡನ್ನು ನಿತ್ಯೋತ್ಸವ ಗೀತೆ ಮೂಲಕ ಅದ್ಬುತವಾಗಿ ವರ್ಣಿಸಿದ ನಿತ್ಯೋತ್ಸವ ಕವಿ ಎಂದೇ ಖ್ಯಾತಿ ಪಡೆದಿದ್ದ ನಿಸಾರ್ ಅಹ್ಮದ್ ಅವರ ಅಗಲಿಕೆ ಸುದ್ದಿ ಅತೀವ ಬೇಸರ ತರಿಸಿದೆ. ಇಂತಹ ಮಹಾನ್ ಕವಿಯನ್ನು ಕಳೆದುಕೊಳ್ಳುವ ಮೂಲಕ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಂಸ್ಕೃತಿಕ ರಾಯಭಾರಿ: `ಜೋಗದ ಸಿರಿ ಬೆಳಕಿನಲ್ಲಿ' ಹಾಡು ನನ್ನ ಕಿವಿಯಲ್ಲಿ ಈಗಲೂ ಅನುರುಣಿಸುತ್ತಿದೆ. ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಕೆ.ಎಸ್.ನಿಸಾರ್ ಅಹ್ಮದ್ ಅವರು ಸಾಹಿತ್ಯ ಸೇವೆ ಅನನ್ಯ. ಈ ನಾಡು ಕಂಡ ಹೆಮ್ಮೆಯ ಸಾಹಿತಿ. ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

'ಮನಸು ಗಾಂಧಿ ಬಝಾರ್ ಹಾಗೂ ನಿತ್ಯೋತ್ಸವ ಇವು ಕೆ.ಎಸ್.ನಿಸಾರ್ ಅಹ್ಮದ್ ಅವರ ಸಂವೇದನಾಶೀಲ ಹಾಗೂ ಅವರು ಜನಪ್ರಿಯ ಕವಿ. ಇವರ ನಿಧನದಿಂದ ಕನ್ನಡ ಸಾಹಿತ್ಯದ ಬಹುಮುಖ ಪ್ರತಿಭೆಯು ಸಾಹಿತ್ಯ ಪ್ರಭೆ ಮುಸುಕಾದಂತಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕುರುಣಿಸಲಿ' ಎಂದು ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಪ್ರಾರ್ಥಿಸಿದ್ದಾರೆ.

ಎಲ್ಲರ ಚೈತನ್ಯ: 'ಕೆ.ಎಸ್.ನಿಸಾರ್ ಅಹ್ಮದ್ ಅವರು ಕಾವ್ಯದಿಂದ ಮಾತ್ರವಲ್ಲದೆ, ತಮ್ಮ ವಿಚಾರದಿಂದಲೂ ಎಲ್ಲರಿಗೂ ಚೈತನ್ಯ ತುಂಬಿದವರು. ಅವರ ನಿತ್ಯೋತ್ಸವ ಹಾಗೂ ಕುರಿಗಳು ಸಾರ್ ಕುರಿಗಳು, ಬೆಣ್ಣೆ ಕದ್ದ ನಮ್ಮ ಕೃಷ್ಣ ಪದ್ಯಗಳನ್ನು ಯಾರು ಮರೆಯಲು ಸಾಧ್ಯ? ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ಮತ್ತು ರಮ್ಯತೆಯನ್ನು ಮೇಳೈಸಿ ಬರೆದ ಮಹಾಕವಿ ಅವರು' ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಸಂತಾಪ ಸೂಚಿಸಿದ್ದಾರೆ.

ರಾಜ್ಯಕ್ಕೆ ನಷ್ಟ: ಹದಿನೈದು ದಿನಗಳ ಹಿಂದೆಯೆಷ್ಟೇ ಅಮೆರಿಕಾದಲ್ಲಿದ್ದ ತಮ್ಮ ಪುತ್ರನನ್ನು ಕಳೆದುಕೊಂಡಿದ್ದ ನಿಸಾರ್ ಅಹ್ಮದ್ ಅವರ ಸಾವು ಒಂದು ದುರಂತ. ಪುತ್ರನ ಮೃತದೇಹ ಭಾರತಕ್ಕೆ ತರಲಾಗದೆ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದ ನಿಸಾರ್ ಅಹ್ಮದ್ ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಣ್ಣೀರಿಟ್ಟಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಗಣ್ಯರು ನಿಸಾರ್ ಅಹ್ಮದ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

'ಕವಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಿಬಾರದ ನಷ್ಟ. ಯಾವ ಪಂಥ-ಪಂಗಡಕ್ಕೆ ಕಟ್ಟಿಕೊಳ್ಳದೆ ಸ್ವಚ್ಛಂದವಾಗಿ ಹಕ್ಕಿಯಂತೆ ಕಾವ್ಯಕಟ್ಟುತ್ತಾ ಸರ್ವಜನ ಪ್ರಿಯರಾಗಿದ್ದ ನಿಸಾರ್ ಅಹ್ಮದ್ ಅವರ ಕಾಯ ಅಳಿದರೂ ಅವರ ಕಾವ್ಯದ ಮೂಲಕ ನಮ್ಮ ನೆನಪಿಲ್ಲಿ ಸದಾ ಜೀವಂತ. ನನ್ನ ಗೌರವಪೂರ್ಣ ಸಂತಾಪಗಳು'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News