ರಾಜ್ಯದ ಈ ಐದು ಜಿಲ್ಲೆಗಳು 'ಒಂದೇ ಘಟಕ': ಅಂತರ್ ಜಿಲ್ಲಾ ಸಂಚಾರಕ್ಕೆ ಪಾಸ್ ಅಗತ್ಯವಿಲ್ಲ

Update: 2020-05-03 16:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 3: ಲಾಕ್ ಡೌನ್ ಹಿನ್ನೆಲೆ ನಿಯಮಗಳನ್ನು ಕೊಂಚ ಮಟ್ಟಿಗೆ ಸಡಿಲಗೊಳಿಸಲಾಗಿದ್ದು, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಒಂದೇ ಘಟಕ ಎಂದು ಪರಿಗಣಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಪಾಸ್ ಪಡೆದುಕೊಳ್ಳುವ ಅಗತ್ಯ ಇಲ್ಲ ಎಂದು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದ್ದಾರೆ.

ಅನುಮತಿಸಲಾದ ಚಟುವಟಿಕೆಗಳನ್ನು ಕೈಗೊಳ್ಳಲು ಈ ಐದು ಜಿಲ್ಲೆಗಳಲ್ಲಿ ಬೆಳಗ್ಗೆ 7 ಯಿಂದ ಸಂಜೆ 7 ರವರೆಗೆ ಚಲನವಲನ ಉದ್ದೇಶದಿಂದ ಒಂದೇ ಘಟಕವಾಗಿ ಪರಿಗಣಿಸಲಾಗಿದ್ದು, ಈ ವ್ಯಾಪ್ತಿಯೊಳಗಿನ ಜನರು, ಕೆಲಸ ಮಾಡುತ್ತಿರುವ ಕಂಪೆನಿ, ಸಂಸ್ಥೆ, ನೀಡಲಾಗುವ ಪತ್ರದ ಮೇಲೆ ಮತ್ತು ಗುರುತಿನ ಚೀಟಿಯೊಂದಿಗೆ ಚಲನವಲನಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಈ ಜಿಲ್ಲೆಗಳಲ್ಲಿ ಯಾವುದೇ ಅಂತರ್ ಜಿಲ್ಲಾ ಪಾಸ್‍ಗಳ ಅವಶ್ಯಕತೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನು, ಇತರೆ ಜಿಲ್ಲೆಗಳಿಗೆ ಅನುಮತಿಸಲಾದ ಚಟುವಟಿಕೆಗಳಿಗೆ ಅಂತರ್ ಜಿಲ್ಲೆಗಳ ಸಂಚಾರಕ್ಕಾಗಿ ಪಾಸ್ ಅಗತ್ಯವಿರುತ್ತದೆ. ಇದನ್ನು ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಆಯುಕ್ತಾಲಯದ ಪೊಲೀಸ್, ಉಪ ಆಯುಕ್ತರು ನೀಡುತ್ತಾರೆ.ಆದರೆ, ಅನುಮತಿಸಲಾಗದ ಚಟುವಟಿಕೆಗಳಿಗೆ ಪಾಸ್ ಅನ್ನು ನೀಡಲಾಗುವುದಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಒಂದು ಬಾರಿ ಸಂಚಾರಕ್ಕೆ ಪಾಸ್

ಅಂತರ್ ಜಿಲ್ಲೆಗಳ ಸಂಚಾರಕ್ಕಾಗಿ ಸಂಕಷ್ಟದಲ್ಲಿರುವ ಸಿಲುಕಿರುವ ವ್ಯಕ್ತಿಗಳಿಗೆ ಒಂದು ಬಾರಿಯ ಪಾಸ್ ನೀಡಲು ಸಹ ಅನುಮತಿ ನೀಡಲಾಗಿದೆ.

-ಟಿ.ಎಂ.ವಿಜಯಭಾಸ್ಕರ್, ಮುಖ್ಯ ಕಾರ್ಯದರ್ಶಿ, ರಾಜ್ಯ ಸರಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News