ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 651ಕ್ಕೇರಿಕೆ
ಬೆಂಗಳೂರು, ಮೇ 4: ರವಿವಾರದ ವರದಿಯಂತೆ ಒಂದೇ ದಿನ ದಾವಣಗೆರೆಯಲ್ಲಿ 21 ಜನರಲ್ಲಿ ಕೊರೋನ ಪಾಸಿಟಿವ್ ವರದಿಗಳು ದೃಢಪಟ್ಟಿರುವುದು ಸೇರಿದಂತೆ ರಾಜ್ಯದಲ್ಲಿ ಸೋಮವಾರ 37 ಹೊಸ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಕಲಬುರಗಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಕೊರೋನ ಸೋಂಕಿತರು ಮೃತಪಟ್ಟಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆ 27 ಕ್ಕೆ ಹಾಗೂ ಸೋಂಕಿತರ ಸಂಖ್ಯೆ 651 ಕ್ಕೆ ಹೆಚ್ಚಳವಾಗಿದೆ.
ಕಲಬುರಗಿ ಜಿಲ್ಲೆಯ 56 ವರ್ಷದ ರೋಗಿ 587 ನ್ಯೂಮೋನಿಯಾದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ದಾವಣಗೆರೆ ಜಿಲ್ಲೆಯ ನಿವಾಸಿ 48 ವರ್ಷದ ಮಹಿಳೆಯಾಗಿದ್ದ ರೋಗಿ 651 ಉಸಿರಾಟದ ತೊಂದರೆ, ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು.
ದಾವಣಗೆರೆಯಲ್ಲಿ 22 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. ಚಿಕ್ಕಬಳ್ಳಾಪುರದಲ್ಲಿ ಒಂದು ಪ್ರಕರಣ, ಮಂಡ್ಯದಲ್ಲಿ ಎರಡು, ಹಾವೇರಿಯಲ್ಲಿ ಒಂದು, ವಿಜಯಪುರ ಒಂದು, ಕಲಬುರಗಿ ಎರಡು, ಬೀದರ್ ಜಿಲ್ಲೆಯಲ್ಲಿ 7 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಸೋಮವಾರ ಧಾರವಾಡದಲ್ಲಿ ಇಬ್ಬರು, ಕಲಬುರಗಿಯಲ್ಲಿ ಮೂರು ಜನ, ವಿಜಯಪುರದಲ್ಲಿ ನಾಲ್ಕು ಜನ, ಬೆಳಗಾವಿಯಲ್ಲಿ 11 ಜನ, ಮಂಡ್ಯ ಮೂರು, ಬೆಂಗಳೂರು ನಗರ ಮೂರು, ಮೈಸೂರಿನಲ್ಲಿ ಇಬ್ಬರು ಸೇರಿ ಒಟ್ಟು 28 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ರಾಜ್ಯದಲ್ಲಿ ಇದುವರೆಗೂ 321 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, 302 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ 1154 ಜನರನ್ನು ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿಸಲಾಗಿದೆ. ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ನೌಕರರು ಹಾಗೂ ಸಂಚಾರಕರರು ತಮ್ಮ ಗುರುತಿನ ಚೀಟಿ, ನೌಕರಿಯ ಗುರುತಿನ ಚೀಟಿ ತೋರಿಸುವ ಮೂಲಕ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಂಚಾರ ಮಾಡಬಹುದಾಗಿದೆ. ಇತರೆ ಜಿಲ್ಲೆಗಳಿಗೆ ಪ್ರಯಾಣಿಸಲು ಪ್ರತ್ಯೇಕ ಪಾಸ್ ಪಡೆಯಲು ಆದೇಶಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಹೋಂಗಾರ್ಡ್‍ಗಳು, ಪೌರ ರಕ್ಷಣಾ ದಳ, ಅಗ್ನಿಶಾಮಕ ದಳದ ನೌಕರರು ಹಾಗೂ ಅಧಿಕಾರಿಗಳು, ಬಂಧಿಖಾನೆ ಸಿಬ್ಬಂದಿಗಳು, ಪೌರ ಕಾರ್ಮಿಕರು, ಸ್ಯಾನಿಟೈಸರ್ ಕೆಲಸಗಾರರು, ಅವರಿಗೆ ಸಂಬಂಧಿಸಿದ ವಾಹನ ಚಾಲಕರು ಹಾಗೂ ಲೋಡರ್‍ಗಳಿಗೆ ಮನೋಸ್ಥೈರ್ಯ ತುಂಬಲು 30 ಲಕ್ಷ ಪರಿಹಾರ ಒದಗಿಸಲು ಸರಕಾರ ಮಂಜೂರಾತಿ ನೀಡಿದೆ.