×
Ad

ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಕರೆತರಲು ವಿಶೇಷ ರೈಲು ವ್ಯವಸ್ಥೆ ಮಾಡಿ

Update: 2020-05-04 18:04 IST

ಬೆಂಗಳೂರು, ಮೇ 4: ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ನಿಟ್ಟಿನಲ್ಲಿ ವಿಶೇಷ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.

ಸೋಮವಾರ ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ಭೇಟಿ ಮಾಡಿದ ನಿಯೋಗವು, ಕೋವಿಡ್-19 ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಕುರಿತು ಇಡೀ ದೇಶಕ್ಕೆ ತಿಳಿದಿದೆ. ಬಡ ವಲಸಿಗ ಕಾರ್ಮಿಕರು ಯಾವ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂಬುದು ತಿಳಿದಿದೆ ಎಂದು ಹೇಳಿದ್ದಾರೆ.

ಹಲವು ರಾಜ್ಯಗಳು ತಮ್ಮ ರಾಜ್ಯದಿಂದ ವಲಸೆ ಹೋಗಿರುವ ಕಾರ್ಮಿಕರನ್ನು ಮರಳಿ ಕರೆತರಲು ವ್ಯವಸ್ಥೆ ಮಾಡಿಕೊಂಡಿವೆ. ಅದೇ ನಮ್ಮ ರಾಜ್ಯದಿಂದಲೂ ಹಲವಾರು ಮಂದಿ ವಿವಿಧ ವೃತ್ತಿಗಳ ಹಿನ್ನೆಲೆಯಲ್ಲಿ ಅನ್ಯ ರಾಜ್ಯಗಳಲ್ಲಿದ್ದಾರೆ. ಬಹುತೇಕ ಮಂದಿ ತಮ್ಮ ಕುಟುಂಬದಿಂದ ದೂರವಿದ್ದಾರೆ. ಈ ಸಂಕಷ್ಟ ಸಂದರ್ಭದಲ್ಲಿ ಪುನಃ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತೆರಳಲು ಬಯಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.  

ಆದುದರಿಂದ, ರಾಜ್ಯ ಸರಕಾರವು ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ವಿಶೇಷ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಸಂಬಂಧ ರಾಜ್ಯ ಸರಕಾರಕ್ಕೆ ಅಗತ್ಯ ನೆರವು ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಸಿದ್ಧವಾಗಿದೆ. ಕರ್ನಾಟಕ ಹಾಗೂ ಕನ್ನಡಿಗರಿಗಾಗಿ ಅಗತ್ಯವಿರುವ ವೆಚ್ಚವನ್ನು ರೈಲ್ವೆ ಇಲಾಖೆಗೆ ಭರಿಸಲು ಸಿದ್ಧವಾಗಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ರಾಜ್ಯ ಸರಕಾರವು ರೈಲೈ ಇಲಾಖೆಯೊಂದಿಗೆ ಚರ್ಚೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ತಮ್ಮ ಮನೆಗಳಿಗೆ ಮರಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ತಾವು ಕೈಗೊಳ್ಳುತ್ತೇವೆ ಎಂಬುದು ನಮ್ಮ ಭಾವನೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ನಿಯೋಗದಲ್ಲಿ ಮಾಜಿ ಸಚಿವರಾದ ಯು.ಟಿ.ಖಾದರ್, ಎನ್.ಚಲುವರಾಯಸ್ವಾಮಿ, ಶಾಸಕರಾದ ಎಚ್.ಪಿ.ಮಂಜುನಾಥ್, ಡಾ.ಅಜಯ್‍ಸಿಂಗ್, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News