ವಾಹನ ಮಾಲಕರಿಂದ ಸಮಗ್ರ ದಂಡ ವಸೂಲಿಗೆ ಎಸ್‍ಡಿಪಿಐ ಖಂಡನೆ
Update: 2020-05-04 18:09 IST
ಬೆಂಗಳೂರು, ಮೇ 4: ಲಾಕ್‍ಡೌನ್ ಅವಧಿಯಲ್ಲಿ ವಶಪಡಿಸಿಕೊಂಡಿರುವ ವಾಹನಗಳ ಮಾಲಕರಿಂದ ಈ ಹಿಂದಿನ ಎಲ್ಲ ಪ್ರಕರಣಗಳಿಗೆ ಒಟ್ಟಿಗೆ ದಂಡ ವಸೂಲಿ ಮಾಡುತ್ತಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಎಸ್‍ಡಿಪಿಐ ಖಂಡಿಸಿದೆ.
ಕಳೆದ ಎರಡು ತಿಂಗಳಿನಿಂದ ಜನತೆ ದುಡಿಮೆಯಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಲಾಕ್‍ಡೌನ್ ಸಂದರ್ಭದಲ್ಲಿ ವಶಪಡಿಸಿಕೊಂಡ ವಾಹನಗಳ ಮೇಲೆ ಈ ಹಿಂದಿನ ಎಲ್ಲ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ವಾಹನ ಮಾಲಕರಿಂದ ಸಮಗ್ರ ದಂಡ ವಸೂಲಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿರುವುದು ಸರಿಯಲ್ಲ.
ಕೊರೋನ ಸೋಂಕಿನ ಸಂದರ್ಭದಲ್ಲಿ ಜನತೆ ಮಾನಸಿಕ, ದೈಹಿಕವಾಗಿ ಸಮಸ್ಯೆಗೆ ಈಡಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಅವರಿಗೆ ನೈತಿಕ ಸ್ಥೈರ್ಯ ನೀಡುವುದು ಸರಕಾರ ಹಾಗೂ ಇಲಾಖಾ ಅಧಿಕಾರಿಗಳ ಕರ್ತವ್ಯ. ಆದರೆ, ಪೊಲೀಸ್ ಇಲಾಖೆ ಜನತೆಯನ್ನು ಮತ್ತಷ್ಟು ಸಮಸ್ಯೆಗೆ ದೂಡುತ್ತಿದೆ ಎಂದು ಎಸ್‍ಡಿಪಿಐ ಪ್ರಕಟನೆಯಲ್ಲಿ ಆರೋಪಿಸಿದೆ.