×
Ad

ಎಸೆಸೆಲ್ಸಿ ಪರೀಕ್ಷೆ ತಯಾರಿಗಳ ಪ್ರಾರಂಭಕ್ಕೆ ಸೂಚನೆ

Update: 2020-05-04 19:43 IST

ಬೆಂಗಳೂರು, ಮೇ 4: ಕೊರೋನ ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿರುವ ಎಸೆಸೆಲ್ಸಿ ಪರೀಕ್ಷೆಗಳನ್ನು ನಡೆಸಲು ಅನುವಾಗುವಂತೆ ಎಲ್ಲ ಸಿದ್ದತೆಗಳನ್ನು ಈಗಿನಿಂದಲೇ ಪ್ರಾರಂಭಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ. 

ಸೋಮವಾರ ರಾಜ್ಯದ ಎಲ್ಲ ಜಿಲ್ಲೆಗಳ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ವೀಡಿಯೋ ಸಂವಾದ ನಡೆಸಿದ ಅವರು, ಎಲ್ಲ ಜಿಲ್ಲೆಗಳಿಂದ ಬಂದ ಒಟ್ಟಾಭಿಪ್ರಾಯದಂತೆ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ದಿನಾಂಕ ತಿಳಿಯಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಕೊರೋನ ಸೋಂಕಿನ ನಂತರದ ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವಶ್ಯಕವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಗಳನ್ನು ನಿರ್ವಹಿಸುವ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಕೊರೋನ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ಮತ್ತು ಕಂಟೈನ್‍ಮೆಂಟ್ ಪ್ರದೇಶಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕೈಗೊಳ್ಳಬೇಕಿರುವ ಪರೀಕ್ಷಾ ಸಿದ್ದತೆ ಕುರಿತು ಅಭಿಪ್ರಾಯ ಪಡೆದ ಸಚಿವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿರುವ ಈ ದಿನಗಳಲ್ಲಿ ಮಕ್ಕಳ ಮಾನಸಿಕ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರೀಕ್ಷಾ ಸಿದ್ದತೆಯನ್ನು ಜಾರಿಯಲ್ಲಿಡಬೇಕೆಂದು ತಿಳಿಸಿದ್ದಾರೆ.

ಎಸೆಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಒದಗಿಸಿ ಥರ್ಮಲ್ ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಹಾಜರುಪಡಿಸಿಲು ಕ್ರಮ ಕೈಗೊಳ್ಳಬೇಕು. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡುವಂತೆ ಅವರು ಸೂಚನೆ ನೀಡಿದ್ದಾರೆ.

ಮುಖ್ಯಾಂಶಗಳು: 
►ಶಿಕ್ಷಣ ಇಲಾಖೆ ಚಂದನವಾಹಿನಿಯಲ್ಲಿ ಈಗಾಗಲೇ ಪರೀಕ್ಷಾರ್ಥಿಗಳಿಗೆ ಪುನರ್ ಮನನ ತರಗತಿಗಳನ್ನು ನಡೆಸುತ್ತಿದ್ದು, ಈ ವಾರದಿಂದಲೇ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೂ ಪುನರ್ ಮನನ ತರಗತಿಗಳನ್ನು ಪ್ರಾರಂಭಿಸಲಾಗುವುದು.

►ಕಂಟೈನ್‍ಮೆಂಟ್ ವಲಯಗಳಲ್ಲಿರುವ ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸುವುದು, ಉಪಕೇಂದ್ರಗಳನ್ನು ಸ್ಥಾಪಿಸುವುದು, ಪ್ರತಿ ಪರೀಕ್ಷಾ ಕೊಠಡಿಯಲ್ಲಿ ತಲಾ 24 ಮಕ್ಕಳ ಬದಲಿಗೆ ಕಡಿಮೆ ಸಂಖ್ಯೆಯ ಮಕ್ಕಳನ್ನು ಕೂಡಿಸುವುದು ಹಾಗೂ ಪ್ರತಿಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿಟಿವಿ, ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ಸಮಗ್ರವಾದ ಕ್ರಿಯಾಯೋಜನೆ ತಯಾರಿಸಬೇಕು.

►ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ವಿಷಯವಾರು ಅವಶ್ಯಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನ ವಹಿಸಬೇಕು.

►ಈಗಾಗಲೇ ಬೇರೆ ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳಿಗೆ ಅವರು ಪ್ರಸ್ತುತ ಇರುವ ಸ್ಥಳಗಳಲ್ಲಿಯೇ ಹತ್ತಿರದ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಕುರಿತಂತೆ ಕ್ರಿಯಾಯೋಜನೆ ರೂಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News