×
Ad

ಲಾಕ್‍ಡೌನ್ ಸಂಕಷ್ಟದಲ್ಲಿ ಹಲಸು ಬೆಳೆಗಾರರು

Update: 2020-05-04 22:50 IST

ಬೆಂಗಳೂರು, ಮೇ 4: ಮಾವಿನ ಹಣ್ಣನ್ನು ಅಪಾರ್ಟ್ ಮೆಂಟ್ ಗಳಲ್ಲಿ ಹಾಗೂ ಅಂಚೆ ಮೂಲಕ ಮಾರಲು ವ್ಯವಸ್ಥೆ ಮಾಡಲಾಗಿದೆ. ಆದರೆ ಹಲಸಿನ ಮಾರಾಟಕ್ಕೆ ವ್ಯವಸ್ಥೆಯಿಲ್ಲದೆ ಹಲಸು ಬೆಳೆದವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮಾವು-ಹಲಸು ಎರಡೂ ಹಣ್ಣು ಏಕಕಾಲಕ್ಕೆ ಮಾರುಕಟ್ಟೆಗೆ ಬರಲಿದ್ದು, ಆರೋಗ್ಯದ ದೃಷ್ಟಿಯಿಂದ ಈ ಎರಡೂ ಹಣ್ಣುಗಳಿಗೂ ಬೇಡಿಕೆ ಹೆಚ್ಚಿರುತ್ತದೆ. ಪ್ರತಿ ವರ್ಷ ಹಣ್ಣಿನ ಸೀಸನ್ ನಲ್ಲಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ ಮೇಳಗಳ ಮೂಲಕ, ರಸ್ತೆ ಬದಿ, ಹೈವೆಗಳಲ್ಲಿ ಹಲಸನ್ನು ಮಾರಲಾಗುತ್ತಿತ್ತು. ಆದರೆ ಇದೀಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈ ಮಾರಾಟದ ವ್ಯವಸ್ಥೆಯಿಲ್ಲ.

ಇದರ ನಡುವೆ ಮಾವಿನ ಹಣ್ಣನ್ನು ಅಪಾರ್ಟ್‍ಮೆಂಟ್‍ಗಳಲ್ಲಿ, ಅಂಚೆ ಮೂಲಕ ಮಾರಲು ವ್ಯವಸ್ಥೆ ಮಾಡಲಾಗಿದೆ. ಆದರೆ ಹಲಸಿನ ಮಾರಾಟಕ್ಕೆ ವ್ಯವಸ್ಥೆಯಿಲ್ಲದೆ ಹಲಸು ಬೆಳೆದವರು ಪರಿತಪಿಸುವಂತಾಗಿದೆ. ಸಾಮಾನ್ಯವಾಗಿ ಮಾವು ಮೇಳಗಳಲ್ಲಿ ಹಲಸನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ಇದೀಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೇಳಗಳಿಗೆ ಕುತ್ತು ಬಂದಿರುವುದರಿಂದ ಹಲಸಿಗೆ ತೊಂದರೆಯಾಗಿದೆ. ಹೈ ವೆಗಳಲ್ಲಿ ಮಾರಲು ಇದೀಗ ಜನರೂ ಇಲ್ಲ. ಮಾರಲು ಅನುಮತಿಯೂ ಇಲ್ಲ.

ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಕೃಷಿ ವಿವಿ ಹಾಗೂ ತೋಟಗಾರಿಕೆ ವಿವಿಗಳ ಸಹಯೋಗದಲ್ಲಿ ಸಾಕಷ್ಟು ಹಲಸು ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಅಧಿಕ ಇಳುವರಿ ಕೊಡುವ ಹಲಸಿನ ಮರಗಳನ್ನು ನೆಟ್ಟು ರೈತರು ಬೆಳೆಸಿದ್ದಾರೆ. 

ಮಾರುಕಟ್ಟೆ ಕಲ್ಪಿಸಿ: ವರ್ಷಕ್ಕೆ ಒಂದು ಬಾರಿ ಮಾತ್ರ ಹಲಸು ಕೊಯ್ಲಿಗೆ ಬರುತ್ತದೆ. ಹತ್ತು ಮರಗಳಿದ್ದು, ಸುಮಾರು 200 ಕಾಯಿಗಳು ಸಿಗುತ್ತವೆ. ಹೈವೆಗಳಲ್ಲಿಟ್ಟುಕೊಂಡು ಮಾರಿ ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಎಲ್ಲಿಯೂ ಹೋಗುವಂತಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಸರಕಾರ ಇದರ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಚಿಕ್ಕನಾಯಕನಹಳ್ಳಿ ರೈತ ಶಂಕರಪ್ಪ ತಿಳಿಸಿದರು.

ಹಲಸು ತಳಿಗಳು: ಬಿಳಿ, ಹಳದಿ, ಹೆಬ್ಬು, ಚಂದ್ರ, ಅಂಬು, ಬಿಳಿ ತೊಳೆ ಹಲಸಿನ ಹಣ್ಣುಗಳಿವೆ. ಅಂಬು ಹಲಸಿನ ಹಣ್ಣು ಕೊಡಗು, ಹೆಬ್ಬು ಹಲಸು ಸಕಲೇಶಪುರ ವ್ಯಾಪ್ತಿಯಲ್ಲಿ ಹೆಸರುವಾಸಿ. ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಚಂದ್ರ ತೊಳೆ ಹಲಸಿನ ಹಣ್ಣನ್ನು ಹೆಚ್ಚಾಗಿ ಬೆಳೆಲಾಗುತ್ತದೆ. ಚಂದ್ರ ತೊಳೆ ಹಲಸಿನ ಹಣ್ಣು ಬಲು ರುಚಿಕರ. ನೋಡುವುದಕ್ಕೂ ತುಂಬ ಆಕರ್ಷಕ.

ಹಲಸಿನ ಹಣ್ಣು ತಿನ್ನುವುದಕ್ಕೆ ಅಷ್ಟೆ ಅಲ್ಲದೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಚಿಪ್ಸ್, ಹಪ್ಪಳ, ದೋಸೆ, ಪಾನಕ, ಕೇಸರಿಬಾತ್, ಪಾಯಸ, ಕಡುಬು, ಸಿರಾ, ಹಲ್ವಾ, ಪಕೋಡ ಸೇರಿದಂತೆ ನಾನಾ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಹಲಸಿನ ಕಾಯಿ ಪಲ್ಯ ಸಹ ಮಾಡಬಹುದು. ಹಲಸಿನ ಹಣ್ಣಿನ ಬೀಜವನ್ನು ಸುಟ್ಟು ಸಾರು ಮಾಡಿಕೊಂಡು ತಿನ್ನುತ್ತಾರೆ. ಹಲಸಿನಲ್ಲಿ ಹೆಚ್ಚು ಪೌಷ್ಟಿಕಾಂಶಗಳಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News