×
Ad

ಯಾವುದೇ ಯೋಜನೆಗಳ ಪ್ರಾರಂಭಕ್ಕೆ ಹಣಕಾಸು ಇಲಾಖೆ ಅನುಮೋದನೆ ಕಡ್ಡಾಯ

Update: 2020-05-04 22:52 IST

ಬೆಂಗಳೂರು, ಮೇ 4: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಅನುಮೋದನೆಗೊಂಡು, ಟೆಂಡರ್ ಆಗಿ ಕಾರ್ಯಾದೇಶ ನೀಡಿರುವುದು ಸೇರಿದಂತೆ ಎಲ್ಲ ಕಾಮಗಾರಿಗಳು ಇನ್ನೂ ಕಾರ್ಯಾರಂಭ ಆಗದೆ ಇದ್ದರೆ ಅವುಗಳನ್ನು ಪ್ರಾರಂಭಿಸಲು ಹಣಕಾಸು ಇಲಾಖೆ ಪೂರ್ವಾನುಮೋದನೆ ಪಡೆಯತಕ್ಕದ್ದು ಎಂದು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎನ್‍ಎಸ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.

ಕೊರೋನ ಸೋಂಕು ತಡೆಗಟ್ಟಲು ರಾಜ್ಯಾದ್ಯಂತ ಲಾಕ್‍ಡೌನ್ ಜಾರಿಗೊಳಿಸಿದ್ದರಿಂದ ಆಡಳಿತ ಇಲಾಖೆಗಳು ಮುಂದುವರೆದ ಯೋಜನೆಗಳು ಹಾಗೂ ಹೊಸ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸುವಂತಿಲ್ಲ. ಒಂದು ವೇಳೆ ಆದೇಶ ಹೊರಡಿಸಿದ್ದರೆ ಅಂತಹ ಆದೇಶಗಳನ್ನು ಹಿಂಪಡೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಆದರೆ, ಕೆಲವು ಇಲಾಖೆಗಳಲ್ಲಿನ ಮುಂದುವರೆದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಅಗತ್ಯವಾಗಿರುವುದನ್ನು ಆರ್ಥಿಕ ಇಲಾಖೆ ಮನಗಂಡಿದೆ. ಆದರೆ, ಲಾಕ್‍ಡೌನ್‍ನಿಂದಾಗಿ ರಾಜ್ಯದ ಸಂಪನ್ಮೂಲ ಸಂಗ್ರಹ ಸ್ಥಗಿತವಾಗಿರುವುದರಿಂದ ಹಾಗೂ ಲಾಕ್‍ಡೌನ್ ತೆರವುಗೊಳಿಸಿದ್ದರೂ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಕಷ್ಟು ಕಾಲಾವಕಾಶ ಬೇಕಿರುವುದರಿಂದ ಸರಕಾರವು ವೆಚ್ಚವನ್ನು ಆದ್ಯತೆಗೆ ಅನುಸಾರ ಮಾಡಬೇಕಾಗುತ್ತದೆ.

ಹೀಗಾಗಿ ಎಲ್ಲ ಮುಂದುವರಿದ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಇಲಾಖೆ ಪೂರ್ವಾನುಮತಿ ಪಡೆಯಬೇಕು. ಬಜೆಟ್‍ನಲ್ಲಿ ಘೋಷಿಸಿರುವ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು. ಹೊಸ ಯೋಜನೆ ಹಾಗೂ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮೊದಲು ಆರ್ಥಿಕ ಇಲಾಖೆ ಅನುಮೋದನೆ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News