ಅಂಗನವಾಡಿ ಮಕ್ಕಳಿಗೆ ದೀರ್ಘಾವಧಿ ರಜೆ ನೀಡಲು ಸರಕಾರಕ್ಕೆ ಪ್ರಸ್ತಾವನೆ!

Update: 2020-05-04 17:31 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 4: ಅಂಗನವಾಡಿಗಳಿಗೆ 2 ವರ್ಷದಿಂದ 6 ವರ್ಷದವರೆಗಿನ ಮಕ್ಕಳು ಬರಲಿದ್ದು, ಕೊರೋನ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆ ಕೊರೋನ ವೈರಣು ಭೀತಿ ಮುಕ್ತವಾಗುವವರೆಗೂ ಹಾಗೂ ನಂತರವೂ ಮಕ್ಕಳಿಗೆ ದೀರ್ಘಾವಧಿ ರಜೆ ಘೋಷಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

ರಾಜ್ಯದಲ್ಲಿ 62,580 ಅಂಗವಾಡಿಗಳು, 3,331 ಮಿನಿ ಅಂಗನವಾಡಿ ಸೇರಿ 66 ಸಾವಿರ ಅಂಗನವಾಡಿಗಳಿದ್ದು, ಪ್ರತಿದಿನ ಸುಮಾರು 10 ಲಕ್ಷಕ್ಕೂ ಅಧಿಕ ಮಕ್ಕಳು ಬರುತ್ತಾರೆ. ಕೊರೋನ ಹಿನ್ನೆಲೆ ಲಾಕ್‍ಡೌನ್‍ನಿಂದಾಗಿ ಮಕ್ಕಳಿಗೆ ಬಿಸಿಯೂಟದ ಬದಲು ಆಹಾರ ಧಾನ್ಯ, ಮೊಟ್ಟೆ, ಹಾಲಿನ ಪುಡಿಯನ್ನು ಮನೆಗೇ ನೀಡಲಾಗುತ್ತಿದ್ದು, ಲಾಕ್‍ಡೌನ್ ನಂತರವೂ ರಜೆ ನೀಡಿ ಆಹಾರ ಧಾನ್ಯ ವಿತರಿಸುವುದನ್ನು ಮುಂದುವರಿಸಲು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ತಿಳಿಸಿದಂತೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೊರೋನ ಬೇಗನೇ ಹರಡಲಿದ್ದು, ಇದು ಮಕ್ಕಳ ಮೇಲೆಯೇ ಪರಿಣಾಮ ಬೀರಲಿದೆ. ಆದ್ದರಿಂದ ಲಾಕ್‍ಡೌನ್ ನಂತರವೂ  ಅಂಗನವಾಡಿಗೆ ಮಕ್ಕಳು ಬರುವುದನ್ನು ತಡೆ ಹಿಡಿಯಲು ಮನವಿ ಮಾಡಲಾಗಿದೆ.

ಅಂಗನವಾಡಿಗಳಿಗೆ 30 ದಿನ ರಜೆ ನೀಡಲು ಚಿಂತನೆ: ಶಾಲಾ ಮಕ್ಕಳಂತೆ ಅಂಗನವಾಡಿ ಮಕ್ಕಳಿಗೆ ಮತ್ತು ಕಾರ್ಯಕರ್ತೆಯರಿಗೂ ಪ್ರತಿವರ್ಷ ಮೇ 15 ರಿಂದ 31ರವರೆಗೆ ರಜೆ ನೀಡಲಾಗುತ್ತದೆ. ಈ ಬಾರಿ ಮಕ್ಕಳಿಗೆ 30 ದಿನ ರಜೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ. ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಪಂಚಾಯತಿ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯಲ್ಲಿದ್ದು, ಅವರ ಕಾರ್ಯ ಎಂದಿನಂತೆ ನಡೆಯಲಿದೆ.

ಮಕ್ಕಳ ಹಿತರಕ್ಷಣೆಗೆ ಮುಂದಾಗಿರುವ ಇಲಾಖೆಯೂ ಮಕ್ಕಳ ಅಪೌಷ್ಟಿಕತೆ ನಿವಾರಣೆಗೂ ಅಗತ್ಯ ಕ್ರಮಕೈಗೊಂಡಿದ್ದು, ಈ ಸಂಬಂಧ ಸರ್ಕಾರಕ್ಕೆ ಸವಿವರವಾದ ಪ್ರಸ್ತಾವನೆ ಸಲ್ಲಿಸಿದೆ.

ವೈರಸ್ ಹರಡಿರುವ ಸಂಬಂಧ ಆರೋಗ್ಯ ಇಲಾಖೆಯು ಕೆಲ ಜಿಲ್ಲೆಗಳನ್ನು ಹಸಿರು, ಕಿತ್ತಳೆ ಮತ್ತು ಕೆಂಪು ವಲಯ ಎಂದು ಗುರುತಿಸಿದ್ದು, ಹಸಿರು ವಲಯದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಲಾಕ್‍ಡೌನ್ ಸಡಿಲಿಕೆಗೊಳಿಸಲಾಗುತ್ತಿದ್ದು, ಸಂಪೂರ್ಣ ಕೊರೋನ ಮುಕ್ತವಾದ ನಂತರ ಅಂಗನವಾಡಿ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳಿಗೆ ಕಥೆ ಹೇಳಲು ಪೋಷಕರಿಗೆ ಮನವಿ: ಅಂಗನವಾಡಿ ಮಕ್ಕಳಿಗೆ ಅಂಗನವಾಡಿಯಲ್ಲಿ ಹೇಳಿಕೊಟ್ಟರುವ ಕಥೆ, ಹಾಡು ಹಾಗೂ ಇತರೆ ವಿಷಯಗಳನ್ನು ಮನೆಯಲ್ಲಿ ಹೇಳಿಕೊಡುವಂತೆ ಪೋಷಕರಿಗೆ ತಿಳಿಸಲಾಗಿದೆ. ಮಕ್ಕಳನ್ನು ಕ್ರೀಡೆ ಸೇರಿದಂತೆ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಕಾರ್ಯಕರ್ತೆಯರು ಮಕ್ಕಳ ಮನೆಗೆ ತೆರಳಿ ಮನವಿ ಮಾಡುತ್ತಿದ್ದಾರೆ.

ಒಂದು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥ ವಿತರಣೆ
ಕೊರೋನ ಹಿನ್ನೆಲೆ ತಾತ್ಕಾಲಿಕವಾಗಿ ಅಂಗನವಾಡಿಗಳನ್ನು ಬಂದ್ ಮಾಡಲಾಗಿದ್ದು, ರಾಜ್ಯಾದ್ಯಂತ 10 ಲಕ್ಷಕ್ಕೂ ಅಧಿಕ ಅಂಗನವಾಡಿ ಮಕ್ಕಳಿಗೆ ಬಿಸಿಯೂಟದ ಬದಲು ಮೇ ತಿಂಗಳ 30 ದಿನಕ್ಕೆ ಆಗುವಷ್ಟು ಹಾಲಿನ ಪುಡಿ, ಮೊಟ್ಟೆ ಹಾಗೂ ಪೌಷ್ಟಿಕಯುಕ್ತ ಆಹಾರ ಪದಾರ್ಥಗಳನ್ನು ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ.

ಅಂಗನವಾಡಿ ಮಕ್ಕಳಿಗೆ 15 ಅಂಗನವಾಡಿ ಕಾರ್ಯಕರ್ತೆಯರು ಒಂದು ಮಗುವಿಗೆ 8 ಮೊಟ್ಟೆ, 300 ಗ್ರಾಮ್ ಹಾಲಿನ ಪುಡಿ, 3 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ, 200 ಗ್ರಾಮ್ ಪಾಕಿಟ್‍ನ ಹೆಸರುಕಾಳು ಸೇರಿದಂತೆ ವಿವಿಧ ಪೌಷ್ಟಿಕ ಆಹಾರ ಹೊಂದಿರುವ ಕಿಟ್ ಅನ್ನು ನೀಡಲಿದ್ದಾರೆ. ಮೇ ತಿಂಗಳು ಮಾತ್ರವಲ್ಲದೇ ಈ ಯೋಜನೆ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಕೊರೋನ ಹಿನ್ನೆಲೆ ಮಕ್ಕಳಿಗೆ ದೀರ್ಘಾವಧಿ ರಜೆ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಮೊಟ್ಟೆ, ಆಹಾರ ಧಾನ್ಯ ನೀಡಲಾಗುತ್ತಿದೆ. ಲಾಕ್‍ಡೌನ್ ಮುಗಿದರೂ ಕೆಲ ವಾರಗಳ ನಂತರ ಅಂಗನವಾಡಿಗೆ ಮಕ್ಕಳನ್ನು ಸೇರಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.
-ಕೆ.ಎ.ದಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ನಿರ್ದೇಶಕ

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News