ಮದ್ಯ ಮಾರಾಟಕ್ಕೆ ಅನುಮತಿ: ಜನರ ಗಾಯಕ್ಕೆ ಬರೆ ಎಳೆದ ಸರಕಾರ

Update: 2020-05-05 06:03 GMT

 ಸುಮಾರು ಒಂದೂವರೆ ತಿಂಗಳ ಬಳಿಕ ಅಲ್ಪ ಪ್ರಮಾಣದಲ್ಲಿ ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡಿರುವುದು ಅಭಿನಂದನೀಯ. ಕೊರೋನ ನಮ್ಮ ನಡುವೆ ಅಸ್ತಿತ್ವದಲ್ಲಿದೆ ಎನ್ನುವ ಕಾರಣಕ್ಕಾಗಿ ಶಾಶ್ವತವಾಗಿ ಲಾಕ್‌ಡೌನ್ ಘೋಷಿಸಿ ಮನೆಯೊಳಗೆ ಕೂರುವ ಆರ್ಥಿಕ ಸ್ಥಿತಿ ನಮ್ಮದಲ್ಲ. ಈ ಲಾಕ್‌ಡೌನ್‌ನ್ನು ಇನ್ನೂ ಒಂದು ತಿಂಗಳು ಮುಂದುವರಿಸಿದ್ದರೆ ಅದು ‘ಸ್ಫೋಟ’ವಾಗಿ ಬಿಡುತ್ತಿತ್ತು. ಹಸಿವು, ಅನಾರೋಗ್ಯ ಮೊದಲಾದ ಕಾರಣಗಳು ಜನರನ್ನು ಬಂಡೇಳುವಂತೆ ಮಾಡುತ್ತಿತ್ತು. ನಗರಗಳಲ್ಲಿ ದಂಗೆಯಾಗುವ ಸಾಧ್ಯತೆಗಳೂ ಇದ್ದವು. ಈಗಾಗಲೇ ವಲಸೆ ಕಾರ್ಮಿಕರ ಬಿಕ್ಕಟ್ಟು ಗುಜರಾತ್, ಮುಂಬೈಯಂತಹ ರಾಜ್ಯಗಳಲ್ಲಿ ಇಂತಹ ಸ್ಥಿತಿಗಳನ್ನು ನಿರ್ಮಾಣ ಮಾಡಿವೆೆೆ. ಹಾಗೆ ನೋಡಿದರೆ ಕೊರೋನ ಮಾಡಿರುವ ಅನಾಹುತಕ್ಕಿಂತ ಲಾಕ್‌ಡೌನ್ ಮಾಡಿರುವ ಅನಾಹುತಗಳನ್ನು ಸರಿಪಡಿಸುವುದೇ ಸರಕಾರದ ಮುಂದೆ ಸದ್ಯಕ್ಕಿರುವ ಅತಿ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ, ಕೊರೋನ ವೈರಸ್‌ನ ಜೊತೆ ಜೊತೆಗೇ ಬದುಕನ್ನು ಮುನ್ನಡೆಸುವುದು ಹೇಗೆ ಎನ್ನುವ ದಿಕ್ಕಿನ ಕಡೆಗೆ ನಾವು ಆಲೋಚನೆ ಮಾಡಬೇಕಾಗಿದೆ. ಲಾಕ್‌ಡೌನ್ ಸಡಿಲಿಕೆ ಆ ನಿಟ್ಟಿನಲ್ಲಿ ಸರಕಾರ ಇಟ್ಟ ಮೊದಲ ಹೆಜ್ಜೆ. ಆದರೆ ಇದೇ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೂ ಲಾಕ್‌ಡೌನ್ ಸಡಿಲಿಕೆಗೂ ಏನು ಸಂಬಂಧ? ಎನ್ನುವ ಪ್ರಶ್ನೆ ವ್ಯಾಪಕ ಚರ್ಚೆಯಲ್ಲಿದೆ. ಮದ್ಯ ಮಾರಾಟಕ್ಕೆ ಅನುಕೂಲ ಮಾಡಿಕೊಡುವ ಒಂದೇ ಉದ್ದೇಶವನ್ನಿಟ್ಟುಕೊಂಡು ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದೆಯೇ ಎಂದು ಜನರು ಅನುಮಾನಿಸುವಂತಾಗಿದೆ.

  ಲಾಕ್‌ಡೌನ್‌ನಿಂದ ಆರ್ಥಿಕವಾಗಿ ತತ್ತರಿಸಿ ಕೂತಿರುವ ಕಾರ್ಮಿಕರು ಮತ್ತು ಮಧ್ಯಮವರ್ಗದ ಜನರ ಗಾಯಗಳಿಗೆ ಎಳೆದ ಬರೆಯಾಗಿದೆ ಮದ್ಯ ಮಾರಾಟಕ್ಕೆ ಸಿಕ್ಕಿರುವ ಅನುಮತಿ. ಮದ್ಯ ಮಾರಾಟ ಮತ್ತು ಲಾಕ್‌ಡೌನ್ ಸಡಿಲಿಕೆಗೆ ಯಾವ ಸಂಬಂಧವೂ ಇಲ್ಲ. ಸದ್ಯಕ್ಕೆ ಮದ್ಯ ಸೇವನೆ ತನ್ನ ಅಗತ್ಯ ಎಂದು ಜನರು ಬೀದಿಗಿಳಿದ ಒಂದೇ ಒಂದು ಉದಾಹರಣೆಗಳಿಲ್ಲ. ಜನರ ಅತ್ಯಗತ್ಯ ಬೇಡಿಕೆಗಳಲ್ಲಿ ಮದ್ಯ ಸೇರಿರಲೇ ಇಲ್ಲ. ಇಷ್ಟಕ್ಕೂ ಕಳೆದ ಒಂದೂವರೆ ತಿಂಗಳ ಲಾಕ್‌ಡೌನ್, ಮದ್ಯದ ದಾಸರಾಗಿದ್ದ ಸಾವಿರಾರು ಜನರನ್ನು ಮರಳಿ ಬದುಕಿನೆಡೆಗೆ ಕೈ ಹಿಡಿದು ನಡೆಸಿತ್ತು. ಲಾಕ್‌ಡೌನ್‌ನಿಂದ ಏನಾದರೂ ಒಳಿತಾಗಿದೆಯೇ ಎಂದು ಯೋಚಿಸಿದಾಗ ನಮ್ಮ ಮುಂದೆ ಬರುವುದು, ಮದ್ಯದ ಚಟದಿಂದ ಮುಕ್ತರಾದ ಈ ಜನರು. ಮದ್ಯದ ಗುಲಾಮರಾಗಿದ್ದ ಹಲವರು ಲಾಕ್‌ಡೌನ್‌ನಿಂದ ಹತಾಶೆಯ ಸ್ಥಿತಿಗೆ ತಲುಪಿದ್ದರಾದರೂ, ಅವರ ಸಂಖ್ಯೆ ತೀರಾ ಕಡಿಮೆ. ಬಳಿಕ ಅವರೆಲ್ಲ ಅನಿವಾರ್ಯವಾಗಿ ಮದ್ಯರಹಿತ ಬದುಕಿಗೆ ಒಗ್ಗಿದ್ದರು. ಇದೇ ಸಂದರ್ಭದಲ್ಲಿ ರಾಜ್ಯದ ಪ್ರಮುಖ ವೈದ್ಯರು, ತಜ್ಞರು ‘ಜನರಿಂದ ಮದ್ಯವನ್ನು ದೂರವಾಗಿಸಲು ಇದು ಸರಿಯಾದ ಸಮಯ’ ಎಂದೂ ಸರಕಾರಕ್ಕೆ ಸಲಹೆ ನೀಡಿದ್ದರು. ಈ ರಾಜ್ಯದ ಬಹುತೇಕ ತಳಸ್ತರ ಮತ್ತು ಮಧ್ಯಮ ವರ್ಗದ ಮನೆಗಳು ಆರ್ಥಿಕವಾಗಿ ಬಿಕ್ಕಟ್ಟು ಎದುರಿಸುತ್ತಿದರೂ, ಮನೆ ಮಂದಿಯೆಲ್ಲ ಹೆಂಡದ ಗಲಾಟೆಯಿಲ್ಲದೆ ನೆಮ್ಮದಿಯಿಂದಿದ್ದವು. ಬಹುಶಃ ಈ ನೆಮ್ಮದಿಯನ್ನು ಸರಕಾರ ಕೋಟಿ ಗಟ್ಟಲೆ ಹಣ ಸುರಿದರೂ ಮತ್ತೆ ತರುವುದಕ್ಕೆ ಸಾಧ್ಯವಿಲ್ಲ. ಈಗಾಗಲೇ ಮದ್ಯವಿಲ್ಲದ ಬದುಕಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದ ಜನರಿಂದ ಮದ್ಯವನ್ನು ಶಾಶ್ವತವಾಗಿ ದೂರ ಮಾಡಿಸಿದ್ದಿದ್ದರೆ ಈ ರಾಜ್ಯದ ಭವಿಷ್ಯದ ಮೇಲೆ ಅದು ಭಾರೀ ಸತ್ ಪರಿಣಾಮಗಳನ್ನು ಬೀರುತ್ತಿತ್ತು. ಮಧ್ಯಮ ವರ್ಗದ ಜನರ ಬದುಕಿನಲ್ಲಿ ಭಾರೀ ಧನಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದಿತ್ತು. ಲಾಕ್‌ಡೌನ್‌ನಿಂದ ಆದ ಅನಾಹುತಗಳನ್ನು, ಈ ಮೂಲಕವಾದರೂ ತುಂಬಿಕೊಂಡ ಸಂತೃಪ್ತಿಯನ್ನು ಸರಕಾರ ತನ್ನದಾಗಿಸಿಕೊಳ್ಳಬಹುದಾಗಿತ್ತು.

ಆದರೆ ಸರಕಾರ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿತು. ಎಲ್ಲಿ ಜನಸಾಮಾನ್ಯರು ಮದ್ಯ ಸೇವನೆಯನ್ನು ಶಾಶ್ವತವಾಗಿ ಬಿಟ್ಟೇ ಬಿಡುತ್ತಾರೋ ಎಂಬ ಭಯದಲ್ಲಿ ‘ಮದ್ಯ ಮಾರಾಟ’ವನ್ನು ಲಾಕ್‌ಡೌನ್ ಮಧ್ಯೆಯೇ ಘೋಷಿಸಿತು. ಇದರಿಂದ ಬಡವರು ಮತ್ತು ಮಧ್ಯಮವರ್ಗಕ್ಕೆ ಎರಡೆರಡು ರೀತಿಯಲ್ಲಿ ಅನ್ಯಾಯವಾಗಿದೆ. ಒಂದೆಡೆ, ಮದ್ಯದ ಚಟವನ್ನು ಭಾಗಶಃ ಬಿಟ್ಟವರು ಮತ್ತೆ ಮದ್ಯದ ಕಡೆಗೆ ಹೊರಳುವಂತಾಗಿದೆ. ಇದೇ ಸಂದರ್ಭದಲ್ಲಿ, ದಿನಸಿ ಕೊಳ್ಳುವುದಕ್ಕೆಂದು ಎಲ್ಲೆಲ್ಲಿಂದಲೋ ಸಾಲಸೋಲ ಮಾಡಿ ತಂದ ಹಣ ಮದ್ಯದ ಅಂಗಡಿ ಸೇರುವಂತಾಗಿದೆ. ಇದು ಇಡೀ ಕುಟುಂಬವನ್ನು ಇನ್ನಷ್ಟು ಹಸಿವಿನ ಪ್ರಪಾತಕ್ಕೆ ತಳ್ಳಲಿದೆ. ಜೊತೆಗೆ, ಲಾಕ್‌ಡೌನ್ ಕಾರಣದಿಂದ ಪುರುಷರೆಲ್ಲ ಮನೆಯೊಳಗಿರುವುದರಿಂದ, ಮದ್ಯ ಸೇವಿಸಿ ಇವರು ನಡೆಸುವ ಪುಂಡಾಟಗಳನ್ನು ಮಹಿಳೆಯರು ಮಕ್ಕಳು ಅನುಭವಿಸಬೇಕಾಗಿದೆ. ಎರಡು ದಿನಗಳ ಹಿಂದೆ, ಸರಕಾರದ ಖಜಾನೆಯನ್ನು ತುಂಬಿಸಲು ವಲಸೆ ಕಾರ್ಮಿಕರಿಗೆ ಸಾರಿಗೆ ಬಸ್‌ಗಳು ಮೂರು ಪಟ್ಟು ಹಣವನ್ನು ವಸೂಲಿ ಮಾಡಿದ ಕ್ರೌರ್ಯದ ಇನ್ನೊಂದು ರೂಪವೇ ಮದ್ಯ ಮಾರಾಟಕ್ಕೆ ಸರಕಾರ ನೀಡಿರುವ ಅನುಮತಿ. ಇದಕ್ಕೆ ಸರಕಾರ ನೀಡುವ ಒಂದೇ ಒಂದು ಕಾರಣ ‘ಸರಕಾರದ ಖಜಾನೆಯಲ್ಲಿ ಹಣವಿಲ್ಲ’. ಹಾಗಾದರೆ ಮಟ್ಕಾ, ಗಾಂಜಾ, ಡ್ರಗ್ಸ್, ವೇಶ್ಯಾವಾಟಿಕೆ ಸೇರಿದಂತೆ ಇನ್ನಿತರ ಹತ್ತು ಹಲವು ಚಟಗಳನ್ನು ಸರಕಾರವೇ ನಡೆಸಲಿ. ಯಾಕೆಂದರೆ ಇವೆಲ್ಲವೂ ಸರಕಾರೀಕರಣಗೊಂಡರೆ ಸರಕಾರದ ತಿಜೋರಿ ಖಾಲಿಯಾಗುವ ಪ್ರಶ್ನೆಯೇ ಇಲ್ಲ.

ಸರಕಾರ ನಡೆಸಲು ಮದ್ಯ ಮಾರಾಟ ಅನಿವಾರ್ಯ ಎಂದಾದರೆ, ಮದ್ಯ ಸೇವನೆಯ ವಿರುದ್ಧ ಜಾಗೃತಿ ಮೂಡಿಸಲು ಕೋಟ್ಯಂತರ ರೂಪಾಯಿಯನ್ನು ಸರಕಾರ ವೆಚ್ಚ ಮಾಡುತ್ತಿರುವುದಾದರೂ ಯಾಕೆ? ಒಂದೆಡೆ ಜಾಗೃತಿ ಮೂಡಿಸುವ ನಟನೆ ಮಾಡಿ, ಮಗದೊಂದೆಡೆ ಜನರು ಮದ್ಯ ಸೇವಿಸಲು ಒತ್ತಾಯಿಸುವ ಇಬ್ಬಗೆ ನೀತಿಯಿಂದ ಸರಕಾರ ಹೊರ ಬರಲಿ. ಮದ್ಯ ಸೇವನೆ ಜನರ ಇಷ್ಟ ಎಂದು ಸರಕಾರ ತನ್ನನ್ನು ತಾನು ಸಮರ್ಥಿಸಿಕೊಳ್ಳುವಂತಿಲ್ಲ. ಶೋಕಿಗಾಗಿ ಮನೆಯೊಳಗೆ ಕೂತು ಕುಡಿಯುವ ಜನರ ಸಂಖ್ಯೆ ತೀರಾ ಕಡಿಮೆ. ಇಂದು ಸರಕಾರದ ಖಜಾನೆಗೆ ದೊಡ್ಡ ಪ್ರಮಾಣದ ಹಣ ಬರುತ್ತಿರುವುದು ಬಡವರು ಮತ್ತು ಮಧ್ಯಮವರ್ಗದ ಜನರು ತಮ್ಮ ಮೂಲಭೂತ ಅವಶ್ಯಕತೆಗಾಗಿ ಮೀಸಲಿಟ್ಟ ಹಣವನ್ನು ಮದ್ಯ ಸೇವನೆಗೆ ವ್ಯಯ ಮಾಡುತ್ತಿರುವುದರಿಂದ. ಒಂದು ವೇಳೆ ಈ ಹಣ ಮದ್ಯದಂಗಡಿಗೆ ಹೋಗದೆ ಇದ್ದಲ್ಲಿ ಅದು ಅವರ ಆರೋಗ್ಯ, ಶಿಕ್ಷಣ, ಪೌಷ್ಟಿಕತೆಗಳಿಗಾಗಿ ವ್ಯಯವಾಗುತ್ತಿತ್ತು.

ಇತ್ತೀಚೆಗಷ್ಟೇ ಹಿರಿಯ ಚಿಂತಕ ಪ್ರಸನ್ನ ಅವರು ‘ಪವಿತ್ರ ಆರ್ಥಿಕತೆ’ಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಪವಿತ್ರ ಆರ್ಥಿಕತೆಯ ಕುರಿತಂತೆ ಅವರ ಮಾನದಂಡ ಏನಿತ್ತು ಎನ್ನುವುದು ಸ್ಪಷ್ಟವಿಲ್ಲ. ಆದರೆ ಬಡವರನ್ನು ಮದ್ಯಕ್ಕೆ ಬಲಿಪಶುಗಳನ್ನಾಗಿಸುವ ನಮ್ಮ ಆರ್ಥಿಕತೆ ಈ ನಾಡನ್ನು ಖಂಡಿತವಾಗಿಯೂ ಅಭಿವೃದ್ಧಿಯೆಡೆಗೆ ಮುನ್ನಡೆಸಲಾರದು ಮತ್ತು ಅಂತಹ ಹಣದಿಂದ ಸರಕಾರವನ್ನು ನಡೆಸುವ ದೌರ್ಭಾಗ್ಯ ನಮಗೆ ಒದಗಲೂ ಬಾರದು. ಸರಕಾರವಿರುವುದು ಜನರನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವುದಕ್ಕೇ ಹೊರತು, ಅವರನ್ನು ಬಲಿಕೊಟ್ಟು ಸರಕಾರವನ್ನು ಸುಭದ್ರಗೊಳಿಸುವುದಕ್ಕಲ್ಲ. ಅಂತಹ ಸರಕಾರ, ಜನರನ್ನು ಪ್ರತಿನಿಧಿಸುವುದು ಸಾಧ್ಯವೂ ಇಲ್ಲ. ಇನ್ನೂ ತಡವಾಗಿಲ್ಲ. ಮದ್ಯ ಮಾರಾಟಕ್ಕೆ ನೀಡಿರುವ ಆದೇಶವನ್ನು ಸರಕಾರ ತಕ್ಷಣ ಹಿಂದೆಗೆದು ತನ್ನ ಮಾನವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಜನಸಾಮಾನ್ಯರನ್ನೂ ಮದ್ಯ ಸೇವನೆಯ ವಿಷವರ್ತುಲದಿಂದ ರಕ್ಷಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News