ರೈಲು ಟಿಕೆಟ್ ಗೆ ಸಾಮಾನ್ಯ ದರಕ್ಕಿಂತ ಹೆಚ್ಚು ಹಣ ವಸೂಲಿ: ವಲಸೆ ಕಾರ್ಮಿಕನ ಅಳಲು

Update: 2020-05-05 16:28 GMT

ಸೂರತ್: ಇಲ್ಲಿನ ರೈಲು ನಿಲ್ದಾಣದಿಂದ ಬಿಹಾರಕ್ಕೆ ತೆರಳಲು ನಿನ್ನೆ ಸಂಜೆ ರೈಲು ಏರಿದ ನೂರಾರು ಪ್ರಯಾಣಿಕರು ಟಿಕೆಟ್ ದರಕ್ಕಿಂತ ಹೆಚ್ಚಿನ ಹಣ ಪಾವತಿಸಿದ್ದಾಗಿ ಆರೋಪಿಸಿದ್ದಾರೆ. ಊರಿಗೆ ಮರಳುವ ವಲಸೆ ಕಾರ್ಮಿಕರು ಟಿಕೆಟ್ ದರ ಪಾವತಿಸಬೇಕಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ, ಬಿಜೆಪಿ ಆಡಳಿತವಿರುವ ರಾಜ್ಯದಲ್ಲೇ ವಲಸೆ ಕಾರ್ಮಿಕರ ಹಗಲು ದರೋಡೆ ನಡೆದಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಸೂರತ್‍ ನ ವಜ್ರ ಸಂಸ್ಕರಣೆ ಮತ್ತು ಜವಳಿ ಉದ್ಯಮದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ದುಡಿಯುತ್ತಿದ್ದಾರೆ. ಸೋಮವಾರ ವಿಶೇಷ ರೈಲು ಏರಿದ ಇಂತಹ ವಲಸೆ ಕಾರ್ಮಿಕರಲ್ಲಿ ಒಬ್ಬರಾದ ನಿಶಾಂತ್ ರಜಪೂತ್ ಮಾತನಾಡಿ, “ಸೂರತ್‍ನಿಂದ ಪಾಟ್ನಾಗೆ ನಾನು ತೆರಳುತ್ತಿದ್ದೇನೆ. ಟಿಕೆಟ್ ದರ 710 ರೂಪಾಯಿ. ಆದರೆ ನಾನು 725 ರೂಪಾಯಿ ಪಾವತಿಸಿದ್ದು, ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ. ಹಿಂದೆ ನಾವು ಪ್ರಯಾಣಿಸಿದಾಗ ಟಿಕೆಟ್ ದರ 650 ರೂಪಾಯಿ ಇತ್ತು. ಇದೀಗ ನಮ್ಮಲ್ಲಿ ಹಣದ ಕೊರತೆ ಇದ್ದಾಗ ಅಧಿಕ ಪಾವತಿಸಬೇಕಾಗಿದೆ” ಎಂದು ಅಳಲು ತೋಡಿಕೊಂಡರು.

ಜತೆಗೆ ಈ ರೈಲಿನಲ್ಲಿ ಮೂಲಸೌಕರ್ಯಗಳಾದ ಆಹಾರ ಮತ್ತು ನೀರಿನ ಸೌಲಭ್ಯವೂ ಇರಲಿಲ್ಲ ಎಂದು ದೂರಿದರು.

“ಆಹಾರ ಅಥವಾ ನೀರು ಕೂಡಾ ಲಭ್ಯ ಇಲ್ಲ. ಪರಿಸ್ಥಿತಿ ಹೇಗೇ ಇದ್ದರೂ ನಾವು ಊರಿಗೆ ಮರಳಬೇಕಾಗಿದೆ. ನಡೆದುಕೊಂಡಾದರೂ ಹೋಗಲೇಬೇಕು. ನಮಗೆ ಆಧಾರವೇ ಇಲ್ಲ ಎಂದ ಮೇಲೆ ಇಲ್ಲಿ ಹೇಗೆ ನೆಲೆಸಬೇಕು?, ಸಾಕಷ್ಟು ಸಮಸ್ಯೆಗಳಿವೆ. ನಾವು ಮನೆಗೆ ಹೋದರೆ ಕನಿಷ್ಠ ಹಸಿವಿನಿಂದ ಸಾಯಲಾರೆವು. ಇಲ್ಲಿ ನಾವು ಕೊರೋನಾವೈರಸ್‍ನಿಂದ ಸಾಯಬಹುದು ಅಥವಾ ಸಾಯದಿರಬಹುದು. ಆದರೆ ಖಂಡಿತವಾಗಿಯೂ ಹಸಿವಿನಿಂದ ಸಾಯುತ್ತೇವೆ”ಎಂದು ವಿವರಿಸಿದರು.

ಸಹ ವಲಸೆ ಕಾರ್ಮಿಕನಿಗಾಗಿ ನೆರವಿಗೆ ಮನವಿ ಮಾಡಿದ ಅವರು, “ಸಾಕಷ್ಟು ಮಂದಿಗೆ ಟಿಕೆಟ್ ಸಿಕ್ಕಿಲ್ಲ. ಅವರು ನಡೆಯುತ್ತಿದ್ದಾರೆ. ಅವರಿಗೆ ಯಾವ ಸೌಲಭ್ಯವೂ ಇಲ್ಲ; ಅವರಲ್ಲಿ ಹಣವೂ ಇಲ್ಲ. ಸರ್ಕಾರ ಅಂಥವರಿಗೆ ಏನಾದರೂ ಮಾಡಬೇಕು. ನಮ್ಮಲ್ಲಿ ಸ್ವಲ್ಪ ಹಣ ಇತ್ತು. ಆದ್ದರಿಂದ 700 ರೂಪಾಯಿಗೆ ಟಿಕೆಟ್ ಖರೀದಿಸಿದೆವು. 1000 ರೂಪಾಯಿ ದರ ನಿಗದಿಪಡಿಸಿದ್ದರೂ ನಾವು ಖರೀದಿಸುತ್ತಿದ್ದೆವು. ಹಲವು ಮಂದಿ ಮಹಿಳೆಯರು, ಮಕ್ಕಳು ನೂರಾರು ಕಿಲೋಮೀಟರ್‍ಗಳನ್ನು ನಡೆದುಕೊಂಡೇ ಹೋಗಿದ್ದಾರೆ” ಎಂದು ನಿಶಾಂತ್ ಹೇಳಿದರು.

“ಕೆಲವರಿಗೆ ಆಹಾರವೂ ಇಲ್ಲ. ಅವರಿಗೆ ಏನೂ ಬೇಕಿಲ್ಲ. ಕೇವಲ ಹೊಟ್ಟೆಗೆ ಒಂದಿಷ್ಟು ಸಿಕ್ಕರೆ ಸಾಕು ಎಂದರು. ಮತ್ತೊಬ್ಬ ವಲಸೆ ಕಾರ್ಮಿಕ ರಾಕೇಶ್ ಕುಮಾರ್ ಮಾತನಾಡಿ, “ಜಿಲ್ಲಾಧಿಕಾರಿಗಳ ಕಚೇರಿಯಿಂದ 725 ರೂಪಾಯಿ ಪಾವತಿಸಿ ಟಿಕೆಟ್ ಖರೀದಿಸಿದ್ದೇವೆ” ಎಂದು ವಿವರಿಸಿದರು.

ಸರ್ಕಾರ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಬಗ್ಗೆ ಕೇಳಿದಾಗ, “ಇಲ್ಲ ಸರ್..ಏನನ್ನೂ ಉಚಿತವಾಗಿ ನೀಡಿಲ್ಲ. ಮಧ್ಯಾಹ್ನದ ಬಳಿಕ ಸ್ಕ್ರೀನಿಂಗ್ ಸೆಂಟರ್‍ಗೆ ಕರೆದೊಯ್ಯಲಾಯಿತು. ಮಧ್ಯಾಹ್ನ 3 ಗಂಟೆಯಿಂದ ಹೊರಗಿದ್ದೇನೆ. ಇದೀಗ ಸಂಜೆ ಇಲ್ಲಿ ತಲುಪಿದ್ದೇವೆ. ಒಂದು ಬಾಟಲಿ ನೀರು ಬಿಟ್ಟು ಬೇರೇನೂ ಇಲ್ಲ”ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News