ಮದ್ಯ ಪ್ರಿಯರಿಗೆ ಶಾಕ್: ಅಬಕಾರಿ ಸುಂಕ ಶೇ.17ರಷ್ಟು ಹೆಚ್ಚಿಸಿದ ರಾಜ್ಯ ಸರಕಾರ
ಬೆಂಗಳೂರು, ಮೇ 6: ಮದ್ಯ ಮಾರಾಟಕ್ಕೆ ಸರಿಸುಮಾರು 42 ದಿನಗಳ ನಂತರ ಅವಕಾಶ ನೀಡಿರುವ ರಾಜ್ಯ ಸರಕಾರ ಮದ್ಯದ ಮಾರಾಟ ಸುಂಕವನ್ನು ಶೇ.17ರಷ್ಟು ಹೆಚ್ಚಳ ಮಾಡಿದೆ.
ನೂತನ ದರ ಇನ್ನು ಎರಡು ದಿನದಲ್ಲಿ ಜಾರಿಗೆ ಬರಲಿದೆ. ಈಗಾಗಲೇ ಬಜೆಟ್‍ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲೆ ಶೇ.6ರಷ್ಟು ಸುಂಕ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ ಶೇ.11ರಷ್ಟು ಸುಂಕ ಹೆಚ್ಚಳ ಮಾಡಿ ಒಟ್ಟಾರೆ ಮದ್ಯದ ಬೆಲೆಯನ್ನು ಶೇ.17ರಷ್ಟು ಹೆಚ್ಚಳ ಮಾಡಲಾಗಿದೆ.
ಸರಕಾರದ ಆದಾಯದ ಮೂಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿಯೇ ಮದ್ಯದ ಮೇಲಿನ ಮಾರಾಟ ಸುಂಕವನ್ನು ಶೇ.17ರಷ್ಟು ಹೆಚ್ಚಳ ಮಾಡಲಾಗುತ್ತಿದೆ. ಇಂತಹ ಕ್ರಮದಿಂದಾಗಿ ರಾಜ್ಯ ಸರಕಾರಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ. ರಾಜ್ಯ ಸರಕಾರಕ್ಕೆ ಅತೀ ಹೆಚ್ಚು ವರಮಾನ ನೀಡುವ ಇಲಾಖೆಗಳಲ್ಲಿ ಅಬಕಾರಿ ಇಲಾಖೆಯೇ ಪ್ರಮುಖವಾದುದು. ವಾರ್ಷಿಕವಾಗಿ 22ರಿಂದ 25 ಸಾವಿರ ಕೋಟಿ ರೂ. ವರಮಾನ ನೀಡುವ ಈ ಇಲಾಖೆ ಶೇ.10ರಷ್ಟು ಬಜೆಟ್ ಗಾತ್ರವನ್ನು ಹೊಂದಿದೆ.
ಈಗಾಗಲೇ ದಿಲ್ಲಿ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಸರಕಾರಗಳು ಮದ್ಯದ ಮಾರಾಟ ಸುಂಕವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿವೆ. ಈಗ ಕರ್ನಾಟಕ ಸರಕಾರ ಕೂಡ ಮದ್ಯದ ಮಾರಾಟ ಸುಂಕವನ್ನು ಹೆಚ್ಚಳ ಮಾಡಿದೆ. ಈಗಾಗಲೇ ಮದ್ಯದ ಬಾಟಲಿ ಮೇಲೆ ಹಳೆ ದರವಿದ್ದರೂ ಹೊಸ ದರದಂತೆ ಮದ್ಯ ಮಾರಾಟ ಮಾಡುವಂತೆ ಮದ್ಯ ಮಾರಾಟಗಾರರಿಗೆ ಅಬಕಾರಿ ಇಲಾಖೆ ಸೂಚಿಸಿದೆ.