×
Ad

ಯಾರದೋ ಹಿತಾಸಕ್ತಿಗಾಗಿ ಬಡಪಾಯಿ ಕಾರ್ಮಿಕರನ್ನು ಬಲಿಕೊಡಲು ಹೊರಟಿದ್ದಾರೆ: ಸಿದ್ದರಾಮಯ್ಯ

Update: 2020-05-06 18:03 IST

ಬೆಂಗಳೂರು, ಮೇ 6: 'ಲಾಕ್‍ಡೌನ್ ಕಾಲದಲ್ಲಿ ಬಿಲ್ಡರ್ ಗಳು/ಉದ್ಯಮಿಗಳು ಕಾರ್ಮಿಕರನ್ನು ಕಾಳಜಿಯಿಂದ ನೋಡಿಕೊಂಡಿದ್ದರೆ ಅವರು ಯಾಕೆ ಈಗ ಊರಿಗೆ ಮರಳಲು ಹಟ ಹಿಡಿಯುತ್ತಿದ್ದರು? ಆಗ ಕಣ್ಣು ಮುಚ್ಚಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಈಗ ಕಾರ್ಮಿಕರನ್ನು ಬಲಾತ್ಕಾರವಾಗಿ ಉಳಿಸಿಕೊಳ್ಳಲು ಹೊರಟಿರುವುದು ಜೀವವಿರೋಧಿ ನಡೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಕಾರ್ಮಿಕರು ಊರಿಗೆ ಮರಳಿದರೆ ಉದ್ಯಮ ಮತ್ತು ಕಟ್ಟಡ ನಿರ್ಮಾಣದ ಕೆಲಸಗಳಿಗೆ ಕಾರ್ಮಿಕರಿಲ್ಲದೆ ತೊಂದರೆಯಾಗಲಿದೆ ಎಂದು ಸರಕಾರ ಹೇಳುತ್ತಿರುವುದನ್ನು ನೋಡಿದರೆ, ಯಾರದೋ ಹಿತಾಸಕ್ತಿಗಾಗಿ ಬಡಪಾಯಿ ಕಾರ್ಮಿಕರನ್ನು ಬಲಿಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಹೊರಟಿರುವುದು ಸ್ಪಷ್ಟವಾಗಿದೆ' ಎಂದು ಟೀಕಿಸಿದ್ದಾರೆ.

ನಲ್ವತ್ತು ದಿನಗಳ ಲಾಕ್‍ಡೌನ್ ಅವಧಿಯಲ್ಲಿ ಊಟ-ವಸತಿಯ ವ್ಯವಸ್ಥೆ ಇಲ್ಲದೆ ಈಗಾಗಲೇ ಕಾರ್ಮಿಕರು ರೊಚ್ಚಿಗೆದ್ದಿದ್ದಾರೆ. ಅವರು ಸಿಡಿದೇಳುವ ಮುನ್ನ ಅವರನ್ನು ಅವರ ಊರಿಗೆ ಕಳುಹಿಸಲು ರೈಲು ವ್ಯವಸ್ಥೆ ಮಾಡಬೇಕು' ಎಂದು ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.

ಅಮಾನವೀಯ ನಿರ್ಧಾರ

ಹೊರ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಲು ವ್ಯವಸ್ಥೆ ಮಾಡಿದ್ದ ರೈಲುಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಠಾತ್ತನೆ ರದ್ದು ಮಾಡಿರುವುದು ಅಮಾನವೀಯ ನಿರ್ಧಾರ ಮಾತ್ರವಲ್ಲ, ಕಾರ್ಮಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ.

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News