ಚುನಾವಣೆ ವೇಳೆಯಲ್ಲಿ ಗಲಾಟೆ ಪ್ರಕರಣ: ಶಾಸಕ ಆನಂದ ಮಾಮನಿ ವಿರುದ್ಧದ ಮಾನಹಾನಿ ಪ್ರಕರಣ ರದ್ದು
ಬೆಂಗಳೂರು, ಮೇ 6: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣವನ್ನು ಸಂಸದರ ಹಾಗೂ ಶಾಸಕರ ವಿಶೇಷ ಕೋರ್ಟ್ ರದ್ದು ಮಾಡಿದೆ. ಅಲ್ಲದೆ, ಈ ಪ್ರಕರಣದಲ್ಲಿ ಆನಂದ ಮಾಮನಿ ಹಾಗೂ ಅವರ ಚಾಲಕನನ್ನು ನಿರ್ದೋಷಿಗಳೆಂದು ಕೋರ್ಟ್ ಘೋಷಣೆ ಮಾಡಿದೆ.
ಹಿರಿಯ ವಕೀಲ ಸಂಕೇತ ಏಣಗಿ ವಾದ ಮಾಡಿದ್ದರು. ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರಾದ ರಾಮಚಂದ್ರ ಹುದ್ದಾರ, ಪ್ರಕರಣವನ್ನು ರದ್ದುಗೊಳಿಸಿತು. ಇದೇ ವೇಳೆ ಅಪರಾಧ ಸಾಬೀತು ಮಾಡಲು ವಿಫಲವಾದ ತನಿಖಾಧಿಕಾರಿಗಳ ಬಗ್ಗೆಯೂ ನ್ಯಾಯಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಆದೇಶದ ಬಳಿಕ ಆರೋಪಿಗಳ ಪರ ವಕೀಲ ಸಂಕೇತ ಏಣಗಿ ಮಾತನಾಡಿದ್ದು, ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ವಿಶೇಷ ಪ್ರಕರಣ ಇದಾಗಿತ್ತು. ಒಂದು ವೇಳೆ ಆರೋಪ ಸಾಬೀತಾಗಿ ಆನಂದ ಮಾಮನಿಯವರಿಗೆ ಶಿಕ್ಷೆ ಆಗಿದ್ದರೆ, ಸರಕಾರಕ್ಕೆ ಸಂವಿಧಾನಾತ್ಮಕ ಬಿಕ್ಕಟ್ಟು ಎದುರಾಗುತ್ತಿತ್ತು. ತುರ್ತು ವಿಶೇಷ ವಿಧಾನಸಭಾ ಅಧಿವೇಶನ ನಡೆಸಿ ಸಭಾಧ್ಯಕ್ಷರ ಕಾನೂನಾತ್ಮಕ ಅನುಮತಿ ಪಡೆಯಬೇಕಿತ್ತು. ಹೀಗಾಗಿ, ಇದರಿಂದ, ಬಿಜೆಪಿಗೆ ತೀವ್ರ ಮುಖಭಂಗ ಎದುರಾಗುತ್ತಿತ್ತು ಎಂದು ಹೇಳಿದ್ದಾರೆ.
ಸವದತ್ತಿ ಎಲ್ಲಮ್ಮ ಕ್ಷೇತ್ರದ ಶಾಸಕರಾಗಿರುವ ಆನಂದ ಮಾಮನಿ ಅವರು ಕಗದಾಳ ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ಹೋದಾಗ ಗಲಾಟೆ ನಡೆದಿತ್ತು. ಕದದಾಳ ಗ್ರಾಮದ ನಿವಾಸಿ ಹನುಮಂತಪ್ಪ ಅಪ್ಪನಾಯ್ಕರ್ ಎಂಬುವವರು ತಮ್ಮ ಮೇಲೆ ಆನಂದ ಮಾಮನಿ ಮತ್ತು ಅವರ ಚಾಲಕ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಜಾತಿನಿಂದನೆ ಮಾಡಿದ್ದಾಗಿ ಆರೋಪಿಸಿ ದೂರು ನೀಡಿದ್ದರು. ಈ ಸಂಬಂಧ ಸವದತ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.