ಮೈಸೂರು: ರೌಡಿ ಶೀಟರ್ ಜೊತೆ ಪಾರ್ಟಿ ಮಾಡಿದ್ದ ಫೋಟೋ ವೈರಲ್; ಪಿಎಸ್‍ಐ ಲೋಕೇಶ್ ಅಮಾನತು

Update: 2020-05-06 17:47 GMT

ಮೈಸೂರು,ಮೇ.6: ರೌಡಿ ಶೀಟರ್ ನೊಂದಿಗೆ ಪಾರ್ಟಿ ಮಾಡಿ ತೆಗೆಸಿಕೊಂಡಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪಿಎಸ್‍ಐ ಲೋಕೇಶ್ ಅವರ ಅವರನ್ನು ಅಮಾನತು ಮಾಡಲಾಗಿದೆ.

ಪಿಎಸ್‍ಐ ಲೋಕೇಶ್ ಅವರ ಮೇಲೆ ಗಣಿ ಮಾಲಕರ ಜೊತೆ ಶಾಮೀಲು, ಲಾಕ್ ಡೌನ್ ವೇಳೆ ಮಾಜಿ ಶಾಸಕರು ಆಹಾರ ಕಿಟ್ ಹಂಚುವ ವೇಳೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸದೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ ಸೇರಿದಂತೆ ಹಲವು ಆರೋಪಗಳನ್ನು ಮಾಡಿ ದಸಂಸ ಮುಖಂಡ ಅಣ್ಣಯ್ಯ ದೂರು ನೀಡಿದ್ದರು.

ಜೊತೆಗೆ ಸ್ಥಳೀಯ ರೌಡಿ ಶೀಟರ್ ಬಿ.ಬಿ.ದಿನೇಶ್ ಜೊತೆ ಎ.17 ರಂದು ಮಡಿಕೇರಿ ಜಿಲ್ಲೆಯ ಹಾರಂಗಿ ಡ್ಯಾಂನ ಗೆಸ್ಟ್ ಹೌಸ್‍ನಲ್ಲಿ ಪಾರ್ಟಿ ಮಾಡಿದ್ದಾರೆನ್ನಲಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತಾಲೂಕಿನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಪಿರಿಯಾಪಟ್ಟಣದ ದಸಂಸ ಮುಖಂಡ ಅಣ್ಣಯ್ಯ ಅವರು ಐಜಿಪಿ ಅವರಿಗೆ ದೂರು ನೀಡಿದ್ದರು.  

ಹುಣಸೂರು ಡಿವೈಎಸ್ಪಿ ಸುಂದರ್‍ರಾಜು ಅವರಿಗೆ ಐಜಿಪಿ ವಿಫುಲ್ ಕುಮಾರ್ ಘಟನೆಯ ಸತ್ಯಾಸತ್ಯೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ಇದರಂತೆ ಪರಿಶೀಲಿಸಿ ಡಿವೈಎಸ್ಪಿ ವರದಿ ನೀಡಿದ್ದರು. ಈ ಎಲ್ಲಾ ವರದಿಯನ್ನು ಆಧರಿಸಿ ಪಿಎಸ್‍ಐ ಲೋಕೇಶ್ ಅವರನ್ನು ಐಜಿಪಿ ಅವರ ಸೂಚನೆ ಮೇರೆಗೆ  ಎಸ್ಪಿ ಸಿ.ಬಿ.ರಿಷ್ಯಂತ್ ಅಮಾನತು ಮಾಡಿ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News