ಲಾಕ್‌ಡೌನ್ ಸಡಿಲಿಕೆಯ ದುರುಪಯೋಗ ಸಲ್ಲ

Update: 2020-05-07 07:59 GMT

‘ಲಾಕ್‌ಡೌನ್ ಸಡಿಲಿಕೆಯ ಹೆಸರಿನಲ್ಲಿ’ ಕೊನೆಗೂ ಸರಕಾರ ಮದ್ಯ ಮಾರಾಟಕ್ಕೆ ಚಾಲನೆ ನೀಡಿ ತನ್ನ ಬರಿದಾದ ಖಜಾನೆ ತುಂಬಲು ಮುಂದಾಗಿದೆ. ಮದ್ಯ ಮಾರಾಟಕ್ಕೆ ಅನುಮತಿ ಕೊಡದೇ ಇದ್ದಲ್ಲಿ, ಸರಕಾರಿ ನೌಕರರ ಎಪ್ರಿಲ್ ತಿಂಗಳ ವೇತನ ನೀಡುವುದೇ ಅಸಾಧ್ಯ ಎನ್ನುವ ಸ್ಥಿತಿಯನ್ನು ಸರಕಾರ ಎದುರಿಸುತ್ತಿತ್ತು ಎಂದು ಮೂಲಗಳು ಹೇಳುತ್ತವೆ. ನೇರವಾಗಿ ಮದ್ಯ ಮಾರಾಟಕ್ಕಷ್ಟೇ ಅನುಮತಿ ನೀಡಿದರೆ ಜನರ ತೀವ್ರ ಆಕ್ಷೇಪ ಎದುರಾಗಬಹುದು ಎಂದು, ಅದರ ಜೊತೆಗೆ ಇತರ ಜೀವನಾವಶ್ಯಕ ವಲಯಗಳಲ್ಲೂ ಸಡಿಲಿಕೆಯನ್ನು ಮಾಡಿತು. ಮದ್ಯ ಕೊಳ್ಳುವವರಿಗೆ ಅನುಕೂಲವಾಗಲಿ ಎಂದೇ ರಿಕ್ಷಾ, ದ್ವಿಚಕ್ರವಾಹನಗಳು, ಕಾರುಗಳಿಗೆ ಓಡಾಡಲು ಅನುಮತಿ ನೀಡಿತು. ಜನರ ಬದುಕುವ ಅವಶ್ಯಕತೆಗಳಿಗಾಗಿ ಸಡಿಲಿಕೆಯಾಗಬೇಕಾದ ಲಾಕ್‌ಡೌನ್, ಮದ್ಯ ವ್ಯಸನಿಗಳನ್ನು ಕೇಂದ್ರವಾಗಿಟ್ಟು ಸಡಿಲಕೊಂಡದ್ದು ವಿಪರ್ಯಾಸವೇ ಸರಿ. ಪರಿಣಾಮವಾಗಿ ರಾಜ್ಯಾದ್ಯಂತ ಬಾರ್‌ಗಳ ಮುಂದೆ ನಿಂತ ಕುಡುಕರು, ಸಾರ್ವಜನಿಕವಾಗಿ ‘ಸುರಕ್ಷತೆಯ ಅಂತರ’ವನ್ನು ಉಲ್ಲಂಘಿಸಿದರು. ಅಷ್ಟೇ ಅಲ್ಲ, ಮದ್ಯ ಮಾರಾಟ ಹಲವು ಕುಟುಂಬಗಳ ಗಾಯಗಳ ಮೇಲೆ ಉಪ್ಪು ಸವರಿದಂತಾಯಿತು. ಹಣದ ತೀವ್ರ ಬಿಕ್ಕಟ್ಟಿನ ದಿನಗಳು ಇವು.

ಹಲವು ಮನೆಗಳಲ್ಲಿ ವ್ಯಸನಿಗಳು ಹಣಕ್ಕಾಗಿ ಹೆಂಡತಿ, ಮಕ್ಕಳ ಜೊತೆಗೆ ಕಿತ್ತಾಡಿರುವುದು ಮಾಧ್ಯಮಗಳಲ್ಲಿ ಸುದ್ದಿಯಾದವು. ಬಾಗಲಕೋಟೆಯಲ್ಲಿ ಹಣಕ್ಕಾಗಿ ತನ್ನ ಪತ್ನಿಯನ್ನೇ ಕೊಲೆಗೈದಿರುವುದು ವರದಿಯಾಗಿದೆ. ಇನ್ನೊಂದೆಡೆ, ಕೊರೋನ ಜಾಗೃತಿ ಸಿಬ್ಬಂದಿಯ ಮೇಲೆ ಕುಡುಕರಿಂದ ದಾಳಿಗಳು ನಡೆದಿರುವುದು ವರದಿಯಾಗಿವೆ. ಒಟ್ಟಾರೆಯಾಗಿ ಮದ್ಯ ಮಾರಾಟಕ್ಕೆ ಸರಕಾರ ನೀಡಿದ ಆದೇಶ, ಲಾಕ್‌ಡೌನ್ ಸಡಿಲಿಕೆಯ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡಿದೆ. ಲಾಕ್‌ಡೌನ್ ಸಡಿಲಿಕೆಯೂ ಒಂದು ಪ್ರಯೋಗ. ಅತ್ಯಂತ ಜಾಗರೂಕವಾಗಿ ಸರಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಸುರಕ್ಷತೆಯ ಅಂತರವನ್ನು ಎಲ್ಲೆಲ್ಲಾ ಕಾಪಾಡಲು ಸಾಧ್ಯವಿಲ್ಲವೋ, ಸುರಕ್ಷಿತ ಅಂತರಕ್ಕೆ ಯಾವುದೆಲ್ಲ ಅಡ್ಡಿ ಮಾಡಬಹುದೋ ಅಂತಹ ವಲಯಗಳನ್ನು ತೆರೆಯದೇ, ಜನರ ಬದುಕಿಗೆ ಅತ್ಯಗತ್ಯವಾದ ವಲಯಗಳಲ್ಲಷ್ಟೇ ಲಾಕ್‌ಡೌನ್ ಸಡಿಲಿಕೆಯನ್ನು ಮಾಡಬೇಕು. ಆದರೆ ಮದ್ಯವನ್ನು ಕೂಡ ಸರಕಾರ ಜೀವನಾವಶ್ಯವೆಂದು ಪರಿಗಣಿಸಿರುವುದು ಲಾಕ್‌ಡೌನ್ ಸಡಿಲಿಕೆಯ ಬಗ್ಗೆ ಋಣಾತ್ಮಕ ಭಾವನೆ ಹುಟ್ಟಿದೆ. ಮದ್ಯಪಾನವನ್ನು ವ್ಯಸನ ಮಾಡಿಕೊಂಡವರಿಂದ ಈ ಸುರಕ್ಷಿತ ಅಂತರವನ್ನು ನಿರೀಕ್ಷಿಸುವುದು ಅಸಾಧ್ಯ ಎನ್ನುವುದು ಸರಕಾರಕ್ಕೆ ಗೊತ್ತಿಲ್ಲದೇ ಇರುವ ಸಂಗತಿಯೇನೂ ಅಲ್ಲ. ತನ್ನ ಖಜಾನೆಯನ್ನು ತುಂಬಿಸಲೇಬೇಕಾದ ಅನಿವಾರ್ಯ ಕಾರಣದಿಂದ ಇಂತಹದೊಂದು ಅಪಾಯಕಾರಿ ನಿಲುವಿಗೆ ಸರಕಾರ ಬಂದು ಬಿಟ್ಟಿದೆ. ಹೀಗಿರುವಾಗ, ‘ಲಾಕ್‌ಡೌನ್ ಸಡಿಲಿಕೆ’ ಎನ್ನುವ ಪದವೇ ಸದ್ಯಕ್ಕೆ ಅರ್ಥಹೀನವಾಗಿದೆ. ಮದ್ಯ ಮಾರಾಟದ ಹೆಸರಿನಲ್ಲಿ ಬೀದಿಯಲ್ಲಿ ನೂಕು ನುಗ್ಗಲು ನಡೆಸಬಹುದಾದರೆ, ಮಾಲ್‌ಗಳಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಂಡು ಯಾಕೆ ವ್ಯವಹಾರ ಮಾಡಬಾರದು? ಚಿತ್ರಮಂದಿರಗಳು ಯಾಕೆ ತೆರೆಯಬಾರದು? ಎನ್ನುವ ಪ್ರಶ್ನೆಗಳಿಗೂ ಸರಕಾರ ಉತ್ತರಿಸಬೇಕಾಗಿದೆ.

ಇವೆಲ್ಲದರ ಬೆನ್ನಿಗೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಬಟ್ಟೆ ವ್ಯಾಪಾರ’ಕ್ಕೆ ಅನುಮತಿ ನೀಡಲಾಗಿದೆ. ಇದು ಲಾಕ್‌ಡೌನ್‌ನ ಪರಮಾವಧಿ ಅಣಕವಾಗಿದೆ. ಯಾಕೆಂದರೆ, ಬಟ್ಟೆಗಳನ್ನು ಯಾರೂ ದೂರದಿಂದ ನೋಡಿ ಆಯ್ಕೆ ಮಾಡುವುದಿಲ್ಲ. ಹತ್ತು ಹಲವು ಸೀರೆ, ಬಟ್ಟೆಗಳನ್ನು ಮುಟ್ಟಿ, ಬಿಡಿಸಿ ಬೇಕು ಬೇಡಗಳ ಬಳಿಕವಷ್ಟೇ ಆಯ್ಕೆಯಾಗುತ್ತವೆ. ಹತ್ತು ಸೀರೆಗಳನ್ನು ನೋಡಿ ಒಂದು ಸೀರೆಯನ್ನು ಕೊಳ್ಳುವವರೂ ಕಡಿಮೆ. ಹೀಗಿರುವಾಗ ಬಟ್ಟೆಯಂಗಡಿಯಲ್ಲಿ ಒಬ್ಬರು ಮುಟ್ಟಿರುವುದನ್ನು ಅನಿವಾರ್ಯವಾಗಿ ಇನ್ನೊಬ್ಬರು ಮುಟ್ಟಲೇ ಬೇಕಾಗುತ್ತದೆ. ಇಲ್ಲದೇ ಇದ್ದರೆ ವ್ಯಾಪಾರ ಸಾಧ್ಯವೂ ಇಲ್ಲ. ಹೀಗಿರುವಾಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕಾಏಕಿ ಬಟ್ಟೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವುದಾದರೂ ಯಾಕೆ? ಸದ್ಯವೇ ರಮಝಾನ್ ಹಬ್ಬ ಬರಲಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಬಟ್ಟೆ ಉದ್ಯಮಿಗಳು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಕೊರೋನಕ್ಕಾಗಿ ಮಾತ್ರವಲ್ಲ ಕೋಮು ವೈರಸ್‌ಗಾಗಿಯೂ ಕುಖ್ಯಾತವಾಗಿದೆ. ಬಟ್ಟೆಯಂಗಡಿಯ ನೂಕು ನುಗ್ಗಲು, ಸುರಕ್ಷಿತ ಅಂತರದ ಉಲ್ಲಂಘನೆಗಳು ಅಂತಿಮವಾಗಿ ಕೊರೋನ ಉಲ್ಬಣಿಸಲು ಕಾರಣವಾದರೆ ಅದನ್ನು ಈ ಜಿಲ್ಲೆಯ ಅಲ್ಪಸಂಖ್ಯಾತರ ತಲೆಗೆ ಕಟ್ಟಲು ಮಾಧ್ಯಮಗಳು ತುದಿಗಾಲಿನಲ್ಲಿ ನಿಂತಿವೆ.

ಇದೇ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳ ಬಗ್ಗೆ ಸರಕಾರ ಯಾಕೆ ಕಾಳಜಿ ಹೊಂದಿಲ್ಲ ಎಂಬ ಪ್ರಶ್ನೆಯೂ ಎದುರಾಗಿದೆ. ಬಟ್ಟೆ ವ್ಯಾಪಾರಿಗಳಿಗೆ, ಮದ್ಯ ವ್ಯಾಪಾರಿಗಳಿಗೆ ಅನುಮತಿ ನೀಡಿದ ಬಳಿಕ, ಬೀದಿ ವ್ಯಾಪಾರಿಗಳಿಗೆ ಸರಕಾರ ಯಾಕೆ ಅನುಮತಿ ನೀಡಬಾರದು? ಕೊರೋನ ಬಂದಿರುವುದು ಮೇಲ್‌ಸ್ತರದ ಜನರಿಂದ. ಅಂದರೆ ವಿಮಾನನಿಲ್ದಾಣಗಳ ಮೂಲಕ ಮತ್ತು ಅಂತರ್‌ರಾಷ್ಟ್ರೀಯ ಸಂಪರ್ಕವಿರುವ ಗ್ರಾಹಕರನ್ನೊಳಗೊಂಡ ಬೃಹತ್ ಹೋಟೆಲ್‌ಗಳ ಮೂಲಕ. ಬೀದಿ ವ್ಯಾಪಾರಿಗಳಿಗೂ ಕೊರೋನಾಕ್ಕೂ ಯಾವ ಸಂಬಂಧವೂ ಇಲ್ಲ. ಇದೀಗ ಬೀದಿ ವ್ಯಾಪಾರ ಸ್ಥಗಿತಗೊಂಡ ಕಾರಣದಿಂದ ಸಹಸ್ರಾರು ಕುಟುಂಬಗಳು ಹಸಿವಿನಿಂದ ತತ್ತರಿಸಿವೆೆ. ಅಕ್ಷರಶಃ ಬೀದಿಪಾಲಾಗಿವೆ. ಆದುದರಿಂದ, ಸೂಕ್ತ ಅಂತರದ ಜೊತೆ ಬೀದಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟರೆ ಬೀದಿಪಾಲಾದ ಕುಟುಂಬಗಳು ಸರಕಾರಕ್ಕೆ ಕೃತಜ್ಞವಾಗಬಹುದು. ಲಾಕ್‌ಡೌನ್ ಸಡಿಲಿಕೆ ಸರಕಾರಕ್ಕೆ ಅನಿವಾರ್ಯ. ಕೊರೋನದ ಜೊತೆ ಜೊತೆಗೇ ಬದುಕಲು ನಾವು ಮಾನಸಿಕವಾಗಿ ಸಿದ್ಧರಾಗಬೇಕಾಗಿದೆ. ಕೊರೋನ ಎಂದರೆ ಏನು? ವೈರಸ್‌ಗಳು ಹೇಗೆ ಹರಡುತ್ತವೆ? ಸೋಂಕು ಪೀಡಿತ ವ್ಯಕ್ತಿ ಮತ್ತು ಇತರರು ಯಾವ ರೀತಿಯಲ್ಲಿ ಮುಂಜಾಗ್ರತೆಯನ್ನು ವಹಿಸಬೇಕು ಎನ್ನುವುದರ ಅರಿವು ಎಲ್ಲರಿಗೂ ಇದೆ.

ಮುಂದಿನ ದಿನಗಳಲ್ಲಿ ಸರಕಾರಿ ಪ್ರಾಯೋಜಿತ ಲಾಕ್‌ಡೌನ್‌ನ ಬದಲು ಜನರು ಸ್ವಯಂ ನಿರ್ಬಂಧವನ್ನು ತಮಗೆ ತಾವೇ ಹೇರಲು ಕಲಿತುಕೊಳ್ಳಬೇಕಾಗಿದೆ. ಕೆಮ್ಮು, ನೆಗಡಿಯಂತಹ ಕಾಯಿಲೆಯಿರುವವರು ಯಾವ ಕಾರಣಕ್ಕೂ ಹೊರಗೆ ಹೆಜ್ಜೆಯಿಡದೇ ಇರುವುದು, ಮನೆಗಳಲ್ಲಿ ಅಂತಹ ವ್ಯಕ್ತಿಗಳ ಜೊತೆಗೆ ಅಂತರ ಕಾಯುವುದು, ಜೊತೆಗೆ ಸಾರ್ವಜನಿಕವಾಗಿ ಗರಿಷ್ಠ ಮಟ್ಟದಲ್ಲಿ ಅಂತರ ಕಾಯ್ದುಕೊಳ್ಳುವುದನ್ನು ಸ್ವಯಂ ಪಾಲಿಸಬೇಕು. ನೆಗಡಿ ಲಕ್ಷಣಗಳುಳ್ಳವರು ಸಾರ್ವಜನಿಕವಾಗಿ ಮುಖಗವಚವನ್ನು ಕಡ್ಡಾಯವಾಗಿ ಬಳಸಬೇಕು. ಎಲ್ಲವನ್ನು ಸರಕಾರದ ತಲೆಯ ಮೇಲೆ ಹಾಕಿ, ಹೊಣೆ ಮುಕ್ತರಾಗುವುದು ಉತ್ತಮ ನಾಗರಿಕನ ಲಕ್ಷಣವಲ್ಲ. ಸರಕಾರವೆಂದರೆ ಜನರೇ ಆಗಿರುವುದರಿಂದ, ಲಾಕ್‌ಡೌನ್ ಸಡಿಲಿಕೆಯ ಪ್ರಯೋಗ ಯಶಸ್ವಿಯಾಗಬೇಕಾದರೆ ಜನರೂ ತಮ್ಮ ಪಾಲಿನ ಕೊಡುಗೆಯನ್ನು ನೀಡಬೇಕು. ಜಾಗೃತಿಯಲ್ಲಿ ಜನರೂ ಪಾಲ್ಗೊಳ್ಳಬೇಕು. ಸಾರ್ವಜನಿಕವಾಗಿ ಸುರಕ್ಷತೆಯ ಅಂತರವನ್ನು ಸಂಪೂರ್ಣ ಉಲ್ಲಂಘಿಸುತ್ತಾ, ನಾಳೆ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾದಾಗ ಸರಕಾರವನ್ನು ದೂಷಿಸುವುದರಿಂದ ಯಾವ ಫಲವೂ ಇಲ್ಲ. ಲಾಕ್‌ಡೌನ್ ಸಡಿಲಿಕೆ ಮಾಡಿರುವುದು ಜನಸಾಮಾನ್ಯರ ಬದುಕು ಒಂದಿಷ್ಟು ನಿರಾಳವಾಗಲಿ ಎಂಬ ಸದುದ್ದೇಶದಿಂದ. ಆದುದರಿಂದ ಒಳ್ಳೆಯ ಉದ್ದೇಶಗಳಿಗಾಗಿ ಮಾತ್ರ ಇದನ್ನು ಬಳಸಿ, ಯಶಸ್ವಿಗೊಳಿಸೋಣ. ಕೊರೋನಾವನ್ನು ಸೋಲಿಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News