×
Ad

ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಆರೋಪ: ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

Update: 2020-05-06 23:13 IST

ಮಂಡ್ಯ, ಮೇ 6: ಕೊರೋನ ವಾರಿಯರ್ ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿ, ಪೋಸ್ಟಿಂಗ್ ಕೊಡಿಸೋದಿಲ್ಲ ಎಂದು ಬ್ಲ್ಯಾಕ್‍ಮೇಲ್ ಮಾಡಿದ ಆರೋಪದಡಿ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ವಿರುದ್ಧ ಕೆ.ಆರ್.ಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ.ಆರ್.ಪೇಟೆ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ, ರಸ್ತೆ ಬದಿ ಕಾರು ನಿಲ್ಲಿಸಿಕೊಂಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಗೆ ಮನೆಗೆ ಹೋಗುವಂತೆ ಸೂಚನೆ ನೀಡಿದ್ದು, ಈ ವೇಳೆ ಕೋಪಗೊಂಡು ಪೊಲೀಸ್ ಸಿಬ್ಬಂದಿ ವಿರುದ್ಧವೇ ವಿಜಯಕುಮಾರ್ ಕಿಡಿಕಾರಿದರು ಎನ್ನಲಾಗಿದೆ.

ಅಲ್ಲದೇ, 'ನಾನು ಬಿಜೆಪಿ ಜಿಲ್ಲಾಧ್ಯಕ್ಷ, ನನ್ನನ್ನು ಯಾರು ಕೇಳುವವರು. ನೀನೇನು ಕೇಸು ಹಾಕುತ್ತೀಯಾ. ನಿನ್ನದು ಅತಿಯಾಯಿತು. ನೀನು ಪಿಎಸ್ಐ ಅಲ್ಲ. ಇನ್ನೂ ಪ್ರೊಬೇಷನರಿ ಪೂರ್ತಿಯಾಗಿಲ್ಲ. ಯಾವ ಪೊಲೀಸ್ ಸ್ಟೇಷನ್ ಗೂ ನಿನಗೆ ಯಾವುದೇ ಪೋಸ್ಟಿಂಗ್ ಸಿಗದಂತೆ ಮಾಡುತ್ತೇನೆ. ನನಗೆ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಸಿಎಂ ಸೇರಿದಂತೆ ಸಂಬಂಧಿಸಿದವರಿಗೆ ದೂರು ನೀಡಿ ನಿನ್ನನ್ನು ಅಮಾನತು ಮಾಡಿಸುತ್ತೇನೆ' ಎಂದು ಎಂದು ವಿಜಯಕುಮಾರ್ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಐಪಿಸಿ ಸೆಕ್ಷನ್ 353ರ ಅಡಿ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News