×
Ad

ಮೈಸೂರು ಶೀಘ್ರವೇ ಆರೆಂಜ್ ಝೋನ್ ಗೆ: ಸಚಿವ ಸೋಮಶೇಖರ್ ವಿಶ್ವಾಸ

Update: 2020-05-07 11:45 IST

ಮೈಸೂರು, ಮೇ 7: ಇನ್ನು ವಾರದಲ್ಲೇ ಮೈಸೂರು ಕೊರೋನ ಮುಕ್ತವಾಗುವ ಸಾಧ್ಯತೆ ಇದೆ. ಈಗಾಗಲೇ ಕೊರೋನ ಪಾಸಿಟಿವ್ ಪ್ರಕರಣ 7ಕ್ಕೆ ಬಂದಿದ್ದರಿಂದ ಆದಷ್ಟು ಬೇಗ ಶೂನ್ಯಕ್ಕೆ ಇಳಿಯಲಿದೆ. ಹೀಗಾಗಿ ರೆಡ್ ಝೋನ್ ನಿಂದ ಆರೆಂಜ್ ಝೋನ್ ಆಗಿ ಪರಿವರ್ತಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಶೀಘ್ರ ನಿರ್ಧಾರ ಹೊರಬೀಳಲಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಗ್ರೀನ್ ಝೋನ್ ಗೆ ತರುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ರೈತರ ಅನುಕೂಲಕ್ಕಾಗಿ ಗಡಿಭಾಗ ಸಡಿಲ

ಜಿಲ್ಲೆ 90 ಪಾಸಿಟಿವ್ ಪ್ರಕರಣದಿಂದ 7ಕ್ಕೆ ಬಂದಿದೆ. ರೈತರಿಗೆ ಬೆಳೆದ ಬೆಳೆ ಮಾರಾಟಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಹೂವು, ತರಕಾರಿ ಹಾಗೂ ಇನ್ನಿತರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಯಾವುದಕ್ಕೆ ಅವಕಾಶ ಕೊಡಬೇಕು ಎಂಬುದು ಇಂದು ನಿರ್ಧಾರವಾಗಲಿದೆ ಎಂದು ತಿಳಿಸಿದರು.

ನಾನು ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜು ಅವರಲ್ಲಿ ಮೃಗಾಲಯಕ್ಕೆ ದೇಣಿಗೆ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿ 84 ಲಕ್ಷ ರೂ. ಸಂಗ್ರಹಿಸಿ ಕೊಡುಗೆಯಾಗಿ ನೀಡಿದ್ದಾರೆ. ಇದು ಅವರ ಸಮಾಜಮುಖಿ ಕಾರ್ಯವನ್ನು ತೋರಿಸುತ್ತದೆ ಎಂದು  ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಮೆರಿಕದ ಅಕ್ಕ ಸಂಸ್ಥೆಯ ಅಧ್ಯಕ್ಷ ಅಮರನಾಥ ಅವರೊಂದಿಗೆ ಮಾತನಾಡಿದ್ದೇನೆ. ಅವರೂ ದೇಣಿಗೆ ಬಗ್ಗೆ ಮಾಹಿತಿ ನೀಡಿದ್ದೇನೆ. ಅವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ಅಕ್ಕ ಸಮ್ಮೇಳನ ನಡೆಯದಿರುವುದರಿಂದ ಸಹಾಯ ಮಾಡುವಂತೆ ಕೇಳಿಕೊಂಡಿದ್ದೇನೆ. ಶೀಘ್ರ ಆರ್ಥಿಕ ಸಹಾಯ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಬಳಿಕ ಮಾತನಾಡಿದ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು, ನಾನು ಮೈಸೂರಿಗೆ ಭೇಟಿ ನೀಡುವುದಾಗಿ ಉಸ್ತುವಾರಿ ಸಚಿವ ಸೋಮಶೇಖರ್  ಮೃಗಾಲಯಕ್ಕೆ ಆರ್ಥಿಕ ಸಹಾಯ ಮಾಡುವಂತೆ ಕೇಳಿಕೊಂಡಾಗ ಸಂತೋಷದಿಂದ ಒಪ್ಪಿದೆ. ನನ್ನ ಕ್ಷೇತ್ರದ ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು ಸಹ ಕೊಡುಗೆ ನೀಡಿದ್ದಾರೆ. ಹೀಗಾಗಿ 84 ಲಕ್ಷ ರೂ. ಸಂಗ್ರಹವಾಗಿದೆ ಎಂದು ತಿಳಿಸಿದರು.

ಸಂಸದರಾದ ಪ್ರತಾಪ್ ಸಿಂಹ, ಹಿರಿಯ ಶಾಸಕ ಎಸ್.ಎ.ರಾಮದಾಸ್ ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News