×
Ad

ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ನಿಧನ

Update: 2020-05-07 14:10 IST

ಮಡಿಕೇರಿ ಮೇ 7: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾಳಿಯ ಜನಕ ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಅವರು ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ  ಬೆಂಗಳೂರಿನ ಅವರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)ನ ನಿವೃತ್ತ ವ್ಯವಸ್ಥಾಪಕರಾಗಿದ್ದ ಕುಟ್ಟಪ್ಪ ಹಾಕಿಪ್ರಿಯರಾಗಿದ್ದರು. ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟ ಆಯೋಜಿಸುವ ಯೋಜನೆ ರೂಪಿಸಿದ್ದ ಅವರು, 1997ರಲ್ಲಿ ತಮ್ಮದೇ ಕುಟುಂಬದ ಹೆಸರಿನಲ್ಲಿ ತಮ್ಮ ಸ್ವಗ್ರಾಮ ಕರಡದಲ್ಲಿ ಮೊದಲ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದರು.

ಮುಂದಿನ ದಿನಗಳಲ್ಲಿ ಪ್ರತೀ ವರ್ಷ ಕೊಡಗಿನಲ್ಲಿ ಒಲಿಂಪಿಕ್ ಮಾದರಿಯಲ್ಲಿ ಒಂದು ತಿಂಗಳ ಕಾಲ ಕೌಟುಂಬಿಕ ಹಾಕಿ ಪಂದ್ಯಾವಳಿ ನಡೆಯುವುದರೊಂದಿಗೆ ವಿಶ್ವದ ಗಮನಸೆಳೆದಿತ್ತಲ್ಲದೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿತ್ತು.

ಕಳೆದ 22 ವರ್ಷಗಳಿಂದಲೂ ಕುಟ್ಪಪ್ಪ ಅವರ ಆಶಯದಂತೆ ವರ್ಷಕ್ಕೊಂದು ಕೊಡವ ಕುಟುಂಬಗಳು ಹಾಕಿ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬರುತ್ತಿದ್ದು, ಕಳೆದ ವರ್ಷ ಮಹಾಮಳೆ ಹಾಗೂ ಈ ವರ್ಷ ಕೊರೋನ ಲಾಕ್‌ಡೌನ್‌ನಿಂದಾಗಿ ಹಾಕಿ ಹಬ್ಬ ರದ್ದಾಗಿತ್ತು.

ಕೊಡವ ಕೌಟುಂಬಿಕ ಹಾಕಿ ಹಬ್ಬದ ಜನಕ ಎಂದೇ ಖ್ಯಾತರಾಗಿದ್ದ ಕುಟ್ಟಪ್ಪ ಇನ್ನು ನೆನಪು ಮಾತ್ರವಾಗಿದ್ದು, ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನ ನವರಂಗ್ ಸಮೀಪದ ಹರಿಶ್ಚಂದ್ರ ಘಾಟ್‌ನಲ್ಲಿ ಕುಟ್ಟಪ್ಪ ಅವರ ಅಂತ್ಯಕ್ರಿಯೆ ನಡೆಸಲಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News