ರಾಜ್ಯದಲ್ಲಿ ಗುರುವಾರ 12 ಮಂದಿಗೆ ಕೊರೋನ ಸೋಂಕು ದೃಢ: 705ಕ್ಕೆ ಏರಿದ ಸೋಂಕಿತರ ಸಂಖ್ಯೆ

Update: 2020-05-07 12:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 7: ರಾಜ್ಯದಲ್ಲಿ ಮತ್ತೆ 12 ಮಂದಿಯಲ್ಲಿ ಹೊಸದಾಗಿ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ. ಅಲ್ಲದೇ, ಮಹಿಳೆಯೊಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 30ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಬುಧವಾರ ಸಂಜೆ 5ರಿಂದ ಇಂದು ಸಂಜೆ 5ರವರೆಗೆ 12 ಹೊಸ ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. 

ದಾವಣಗೆರೆ ಜಿಲ್ಲೆಯಲ್ಲಿ ಕೊರೋನ ಸೋಂಕಿತ 55 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮಧುಮೇಹ ರೋಗಿಯಾಗಿದ್ದ ಈ ಮಹಿಳೆಯನ್ನು ಉಸಿರಾಟದ ತೀವ್ರ ತೊಂದರೆಯ ಹಿನ್ನೆಲೆಯಲ್ಲಿ ದಾವಣಗೆರೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ಬಾಗಲಕೋಟೆ, ದಾವಣಗೆರೆ ಮತ್ತು ಕಲಬುರಗಿಯಲ್ಲಿ ತಲಾ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೆ, ಬೆಳಗಾವಿ, ಧಾರವಾಡ ಮತ್ತು ಬೆಂಗಳೂರು ನಗರದಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿದೆ. ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 13 ವರ್ಷದ ಬಾಲಕಿಯೊಬ್ಬಳಲ್ಲಿ ಸೋಂಕು ಕಂಡುಬಂದಿದೆ.

ರಾಜ್ಯದ ಒಟ್ಟು ಸೋಂಕಿತ 705 ಪ್ರಕರಣಗಳಲ್ಲಿ 366 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 30 ಮಂದಿ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News