ರಾಜ್ಯದ ಶಾಲೆಗಳಲ್ಲಿನ್ನು ಕೋವಿಡ್19 ಬಗ್ಗೆ ಪಾಠ

Update: 2020-05-07 13:10 GMT
ಸಚಿವ ಸುರೇಶ್‍ ಕುಮಾರ್

ಬೆಂಗಳೂರು, ಮೇ 7: ಕೋವಿಡ್‍ನಿಂದಾಗಿ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ ಇದ್ದು, ಅದಕ್ಕೆ ಸರಿ ಹೊಂದುವಂತೆ ಶೈಕ್ಷಣಿಕ ವರ್ಷವನ್ನು ಸರಿದೂಗಿಸಬೇಕಾದ ಅಗತ್ಯವಿರುವುದರಿಂದ, ಶಾಲಾ ಶೈಕ್ಷಣಿಕ ಪಠ್ಯವನ್ನು ಆ ಅವಧಿಗೆ ತಕ್ಕಂತೆ ರೂಪಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್ ಸೂಚನೆ ನೀಡಿದರು.

ಗುರುವಾರ ನಗರದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಅವರು, ಈ ಶೈಕ್ಷಣಿಕ ಸಾಲಿನ ಪ್ರಾರಂಭದ ಬಗ್ಗೆ ಈ ಹಂತದಲ್ಲಿ ನಿರ್ಣಯಿಸಲು ಸಾಧ್ಯವಾಗದ ಕಾರಣ 1 ರಿಂದ 10ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿ ಎನ್ನುವ ಪಠ್ಯವನ್ನು ಗುರುತಿಸುವ ಪ್ರಯತ್ನಕ್ಕೆ ಚಾಲನೆ ನೀಡುವಂತೆ ತಿಳಿಸಿದರು.

ಶೈಕ್ಷಣಿಕ ವರ್ಷದಲ್ಲಿ ಕೊನೆಗೊಳ್ಳುವ ಅವಧಿಯ ಆಧಾರದ ಮೇಲೆ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ ಅನವಶ್ಯಕ ಪುನರಾವರ್ತಿತವಾದ ಪಠ್ಯವನ್ನು ಕೈಬಿಡಬೇಕು. ಅತ್ಯವಶ್ಯಕವಾದ ಪಠ್ಯವನ್ನು ಉಳಿಸಿಕೊಳ್ಳಲು ಕ್ರಿಯಾ ಯೋಜನೆಯನ್ನು ಕೂಡಲೇ ಸಿದ್ಧಪಡಿಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.

ಕೊರೋನ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಕಡಿತವಾಗಬಹುದಾದ ಅವಧಿಯ ಆಧಾರದಲ್ಲಿ ಪ್ರತಿ ತರಗತಿ ಹಾಗೂ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ 15 ದಿನಗಳ, 1 ತಿಂಗಳ, ಒಂದೂವರೆ ತಿಂಗಳ, 2 ತಿಂಗಳ ಹಂತವಾರು ಹೆಚ್ಚುವರಿಯಾಗಬಹುದಾದ ಪಠ್ಯವನ್ನು ಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತೃತ ವರದಿ ತಯಾರಿಸಬೇಕೆಂದು ಅವರು ಸೂಚಿಸಿದರು.

ಕೋವಿಡ್ ಕುರಿತ ಪಠ್ಯಕ್ರಮ ಜಾರಿ: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾಮಾಜಿಕ ಹೊಂದಾಣಿಕೆಗಳ ಬಗ್ಗೆ ಪಠ್ಯವನ್ನು ಎಲ್ಲ ತರಗತಿಗಳಿಗೆ ಬೋಧಿಸುವಲ್ಲಿ ಕೂಡಲೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಕೋವಿಡ್-19 ಕುರಿತಂತೆ ಆಯಾ ವಯೋಮಾನದ ವಿದ್ಯಾರ್ಥಿಗಳಿಗೆ ಆಕರ್ಷಣೀಯವಾಗುವ ರೀತಿಯಲ್ಲಿ ಕಿರುಪಠ್ಯ ರಚನೆ ಮಾಡಿ ಶಾಲೆಗಳಿಗೆ ಪೂರೈಸುವುದರ ಜೊತೆಗೆ ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲಿಯೂ ಈ ಕುರಿತಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಇದು ಪಠ್ಯಕ್ರಮದ ಒಂದು ಭಾಗವಾಗಿ ಕಡ್ಡಾಯವಾಗಿ ಕಲಿಯಬೇಕಾದ ವಿಷಯವಾಗಿರುವಂತೆ ಕಟ್ಟುನಿಟ್ಟಾಗಿ ಅನುಷ್ಠಾನವಾಗುವಂತೆ ನೊಡಿಕೊಳ್ಳಬೇಕು ಎಂದು ಸುರೇಶ್ ಕುಮಾರ್ ತಿಳಿಸಿದರು.

ಯೂಟ್ಯೂಬ್ ಚಾನೆಲ್ ಬೋಧನೆ: ಮಕ್ಕಳವಾಣಿ ಯೂಟ್ಯೂಬ್ ಚಾನೆಲ್ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಮಾಹಿತಿ ತಂತ್ರಜ್ಞಾನಾಧಾರಿತವಾದ ಬೋಧನೆಯನ್ನೂ ನಾವು ಪೂರಕ ಕಲಿಕೆಯಾಗಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ 1 ರಿಂದ 10ನೆ ತರಗತಿವರೆಗೆ ವಿಷಯವಾರು, ಅಧ್ಯಾಯವಾರು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳ ಬೋಧನೆಯನ್ನು ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಚಿತ್ರೀಕರಿಸಿ ಯೂಟ್ಯೂಬ್ ಚಾನೆಲ್‍ನಲ್ಲಿ ಶಾಶ್ವತವಾಗಿ ಲಭ್ಯವಿರುವಂತೆ ಮಾಡಲು ಅವರು ತಿಳಿಸಿದರು.

ಸುರಕ್ಷಿತ ಅಂತರ ನಮ್ಮ ಬದುಕಿನ ಸಹಜ ರೀತಿಯಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಅಂತರವನ್ನು ಕಾಯ್ದುಕೊಳ್ಳುವ ರೀತಿಯ ಕಲಿಕಾ ವಾತಾವರಣ ಕಲ್ಪಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದಾಗಿದ್ದು, ಪರ್ಯಾಯ ಮಾರ್ಗಗಳ ಕುರಿತಂತೆ ಕೂಡಲೇ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸುರೇಶ್‍ ಕುಮಾರ್ ಹೇಳಿದರು.

ಇಂತಹ ಸಂದರ್ಭದಲ್ಲಿ ಪೋಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಶಾಲೆಗಳ ಕಲಿಕಾ ವಾತಾವರಣದ ಕುರಿತಂತೆ ಭರವಸೆಯನ್ನು ಮೂಡಿಸುವುದು ಶಿಕ್ಷಣ ಇಲಾಖೆಯ ಪ್ರಥಮ ಆದ್ಯತೆಯಾಗಬೇಕಿದ್ದು, ಈ ಕುರಿತು ಶಿಕ್ಷಕರಿಗೆ ತರಬೇತಿ ನೀಡಿಕೆ ಮತ್ತು ಸಂವೇದನೆಗೊಳಿಸುವ ಅಭಿಯಾನವನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಆರ್ ಟಿಇ ಅಡಿಯ ನಿರಂತರ ಕಲಿಕಾ ಮೌಲ್ಯಮಾಪನದ ಆಶಯವನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವಲ್ಲಿ ಇಂದಿನ ಪರಿಸ್ಥಿತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೋವಿಡ್ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಕ್ರಮಗಳ ಬಗ್ಗೆ ಅಧ್ಯಯನ ಮಾಡಿ, ತಮಗೆ ವರದಿ ಸಲ್ಲಿಸಬೇಕು. ತಂತ್ರಜ್ಞಾನ ಬಳಕೆ ದೃಷ್ಟಿಯಿಂದ ಸರಕಾರದ ಮಾಹಿತಿ ತಂತ್ರಜ್ಞಾನ ವೇದಿಕೆಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ನೀತಿ ನಿರೂಪಣೆಗೆ ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಣೆಯಾದ ಕೂಡಲೆ ಟಿಇಟಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಬೇಕು. ಮುಂದಿನ ದಿನಗಳಲ್ಲಿ ಈ ಪರೀಕ್ಷೆಯನ್ನು ಆನ್‍ಲೈನ್ ಮೂಲಕ ನಿರ್ವಹಣೆ ಮಾಡುವಲ್ಲಿ ಪೂರ್ವ ಸಿದ್ಧತಾ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಹೇಳಿದ ಅವರು, ಇದೇ ಸಂದರ್ಭದಲ್ಲಿ ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ಅನುಮೋದನೆಗೊಂಡ ವರ್ಗಾವಣಾ ಕಾಯ್ದೆಯ ನಿಯಮಗಳನ್ನು ಶೀಘ್ರವೇ ರೂಪಿಸಿ ವರ್ಗಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಆಯುಕ್ತ ಡಾ.ಕೆ.ಜೆ.ಜಗದೀಶ್, ಎಸ್‍ಎಸ್‍ಕೆ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು, ಪಿಯು ಇಲಾಖೆ ನಿರ್ದೇಶಕಿ ಕನಗವಲ್ಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News