ದಾವಣಗೆರೆಯಲ್ಲಿ ಕೊರೋನ ಸೋಂಕಿಗೆ ನಾಲ್ಕನೇ ಬಲಿ: ಇಂದು ಮೂವರಿಗೆ ಸೋಂಕು ದೃಢ
ದಾವಣಗೆರೆ, ಮೇ.7: ದಾವಣಗೆರೆ ನಗರದಲ್ಲಿ ಇಂದು ಮೂವರಲ್ಲಿ ಕೊರೋನ ಸೋಂಕು ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ತೀವ್ರ ಉಸಿರಾಟದ ತೊಂದರೆ ಮತ್ತು ಮಧುಮೇಹ, ಹೈಪರ್ ಬಿಪಿಯಿಂದ ಬಳಲುತ್ತಿದ್ದ ಕೊರೋನ ಸೋಂಕು ತಗಲಿದ್ದ 55 ವರ್ಷ ಮಹಿಳೆ ಸಾವನ್ನಪ್ಪಿದ್ದಾರೆ. ಈ ಮೂಲಕ ನಗರದಲ್ಲಿ ಕೊರೋನ ಸೋಂಕಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ.
ಗುರುವಾರ ಸೋಂಕು ಪತ್ತೆಯಾದ ಮೂವರು ಮಹಿಳೆಯರು ಅನಾರೋಗ್ಯದಿಂದ ಮೇ 4ರಂದು ದಾವಣಗೆರೆ ಜಿಲ್ಲಾ ಆಸ್ಪತ್ರೆ ಗೆ ದಾಖಲಾಗಿದ್ದರು. ಇವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ಒಟ್ಟು ನಗರದಲ್ಲಿ 47 ಪ್ರಕರಣಗಳಿದ್ದು, ಅದರಲ್ಲಿ ನಾಲ್ಕು ಸಾವು ಸಂಭವಿಸಿದೆ. ಇದರಲ್ಲಿ ಇಬ್ಬರು ಗುಣಮುಖರಾಗಿದ್ದು, 41 ಪ್ರಕರಣಗಳು ಸಕ್ರಿಯವಾಗಿವೆ. ದಾವಣಗೆರೆ ಜಿಲ್ಲಾ ಆಸ್ಪತ್ರೆ ಕೋವಿಡ್ ವಾರ್ಡ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
332 ಮಾದರಿಗಳ ವರದಿ ಬಾಕಿ
ಕೊರೋನ ಭೀತಿ ಹೆಚ್ಚಾದ ಹಿನ್ನೆಲೆ ನಗರದ ಐದು ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿ ಬರುವ ಭಾಷಾನಗರ, ಜಾಲಿನಗರ, ಇಮಾಮ್ ನಗರ, ಬೇತೂರ ರಸ್ತೆ ಹಾಗೂ ಕೆಟಿಜೆ ನಗರದ ವ್ಯಾಪ್ತಿಯಲ್ಲಿ 10,317 ಮನೆಗಳ 50,915 ಜನರ ಆರೋಗ್ಯ ತಪಾಸಣೆ ನಡೆಸಿದ್ದು, ಅದರಲ್ಲಿ ಕೆಲ ಜನರಿಗೆ ಜ್ವರ ಇರುವುದು ಪತ್ತೆಯಾಗುದೆ. ಅವರ ಮಾದರಿ ಸಂಗ್ರಹಿಸಿ 332 ಮಾದರಿಗಳನ್ನು ಲ್ಯಾಬ್‍ಗೆ ಕಳುಹಿಸಿದ್ದು, ವರದಿ ಬರಲು ಬಾಕಿಯಿದೆ.