ಕೇರಳ ಘೋಷಿಸಿದ್ದು 20,000 ಕೋಟಿ ರೂ. ಪ್ಯಾಕೇಜ್...ನೆನಪಿರಲಿ: ಬಿಎಸ್‌ವೈಯನ್ನು ಕುಟುಕಿದ ಸಿದ್ದರಾಮಯ್ಯ

Update: 2020-05-07 15:17 GMT

ಬೆಂಗಳೂರು, ಮೇ 7: ಕೊರೋನ ವೈರಸ್ ಸೋಂಕಿನ ಹಾವಳಿಯಿಂದ ನೊಂದವರಿಗೆ 50 ಸಾವಿರ ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಿಸಲು ಸರಣಿ ಮನವಿ ಪತ್ರಗಳ ಮೂಲಕ ಒತ್ತಾಯಿಸಿದ್ದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು 1,610 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದಾರೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ಕೇರಳ ಘೋಷಿಸಿರುವುದು 20 ಸಾವಿರ ಕೋಟಿ ರೂ. ಪ್ಯಾಕೇಜ್ ನೆನಪಿರಲಿ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರಕಾರದ ಗಮನ ಸೆಳೆದಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಸಣ್ಣ/ಮಧ್ಯಮ ಕೈಗಾರಿಕೆಗಳಿಗೆ ಇಎಂಐ ಮನ್ನಾ, ಶೇ.4ರ ಬಡ್ಡಿ ದರದಲ್ಲಿ ಹೊಸಸಾಲ, ಕಡಿಮೆ ಬೆಲೆಗೆ ಕಚ್ಚಾವಸ್ತು ಪೂರೈಕೆ ಸೇರಿದಂತೆ 10 ಸಾವಿರ ರೂ. ಗಳ ಪ್ಯಾಕೇಜ್ ಘೋಷಿಸಲು ಹೇಳಿದ್ದೆ. 2 ತಿಂಗಳ ವಿದ್ಯುತ್ ಬಿಲ್‍ನಲ್ಲಿ ರಿಯಾಯಿತಿಯನ್ನಷ್ಟೇ ಘೋಷಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಯಮ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 22 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಲಾಕ್‍ಡೌನ್ ಕಾಲದಲ್ಲಿ ಮಾಸಿಕ 10 ಸಾವಿರ ರೂ.ನೆರವಿಗೆ ಒತ್ತಾಯಿಸಿದ್ದೆ. ಅವರದ್ದೇ ಕಲ್ಯಾಣಕ್ಕಾಗಿ ಸಂಗ್ರಹಿಸಲಾದ 9 ಸಾವಿರ ಕೋಟಿ ರೂ. ಮೊತ್ತದ ನಿಧಿ ಇದೆ. ಹೀಗಿದ್ದರೂ ಕೇವಲ 11.8 ಲಕ್ಷ ಕಾರ್ಮಿಕರಿಗೆ 1 ತಿಂಗಳಿಗೆ 2 ಸಾವಿರ ರೂ. ನೀಡಿರುವುದು ಕಾರ್ಮಿಕ ದ್ರೋಹ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ನೇಕಾರರಿಗೆ ಲಾಕ್‍ಡೌನ್ ಅವಧಿಯಲ್ಲಿ ತಿಂಗಳಿಗೆ 5 ಸಾವಿರ ರೂ. ಆರ್ಥಿಕ ನೆರವಿನ ಜೊತೆಗೆ ಹಳೆ ಸಾಲದ ಇಎಂಐ ಮನ್ನಾ ಮತ್ತು ಕಡಿಮೆ ಬಡ್ಡಿಯಲ್ಲಿ ಹೊಸ ಸಾಲ ನೀಡಬೇಕೆಂದು ಸಲಹೆ ನೀಡಿದ್ದೆ. ಮುಖ್ಯಮಂತ್ರಿ ಯಡಿಯೂರಪ್ಪ ಒಂದು ತಿಂಗಳಿಗೆ 2 ಸಾವಿರ ರೂ.ನೆರವು ಘೋಷಿಸಿ ಉಳಿದೆಲ್ಲ ಬೇಡಿಕೆಗಳನ್ನು ತಿರಸ್ಕರಿಸಿದ್ದಾರೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅಸಂಘಟಿತ ಕ್ಷೇತ್ರದ ಕ್ಷೌರಿಕ, ದೋಬಿ, ಬಡಗಿ, ಅಕ್ಕಸಾಲಿಗ, ಚಮ್ಮಾರ, ಕಮ್ಮಾರ, ಅರ್ಚಕ, ಶಿಲ್ಪಿ ಹೀಗೆ ವಿವಿಧ ವೃತ್ತಿಯವರಿಗೆ ಲಾಕ್‍ಡೌನ್ ಅವಧಿಯಲ್ಲಿ ಮಾಸಿಕ 10 ಸಾವಿರ ರೂ.ನೀಡಲು ಆಗ್ರಹಿಸಿದ್ದೆ. ಆದರೆ, ಬಿಎಸ್‍ವೈ ಅವರು ಕ್ಷೌರಿಕರು, ದೋಬಿಗಳಿಗೆ 1 ತಿಂಗಳಿಗೆ ಮಾತ್ರ 5 ಸಾವಿರ ರೂ.ನೀಡಿ ಉಳಿದವರನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ದೂರಿದ್ದಾರೆ.

ರೈತರ ಬೆಳೆಗೆ ಯೋಗ್ಯ ಬೆಲೆ ನೀಡಲು 5 ಸಾವಿರ ಕೋಟಿ ರೂ. ಮೊತ್ತದ ಆವರ್ತನಿಧಿ ಸ್ಥಾಪಿಸಿ, ಕೃಷಿ ಉತ್ಪನ್ನಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಖರೀದಿ ಕೇಂದ್ರದ ಮೂಲಕ ಖರೀದಿಸುವಂತೆ ಸಲಹೆ ನೀಡಿದ್ದೆ. ಇವ್ಯಾವುದನ್ನು ಪರಿಗಣಿಸದೆ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಹೂ ಬೆಳೆಗಾರರು ಎಕರೆಗೆ ಅಂದಾಜು 50ಲಕ್ಷ ರೂ.ಖರ್ಚು ಮಾಡಿರುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ಘೋಷಿಸಿರುವುದು ಅನ್ಯಾಯ. ಅವರ ನಷ್ಟದ ಅರ್ಧದಷ್ಟನ್ನಾದರೂ ತುಂಬಿಕೊಡಬೇಕು

-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News