'ಸರಕಾರ ನಮಗೆ ವಿಷ ಕೊಟ್ಟು, ಸಾಯಿಸಲಿ': ಕೊರೋನ ಪ್ಯಾಕೇಜ್‍ನಿಂದ ಹೊರಗಿಟ್ಟಿದಕ್ಕೆ ಲೈಂಗಿಕ ಅಲ್ಪಸಂಖ್ಯಾತರ ಅಸಮಾಧಾನ

Update: 2020-05-07 15:34 GMT
Photo: facebook.com/akkai.padmashali

ಬೆಂಗಳೂರು, ಮೇ 7: ಕೊವೀಡ್-19 ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಕ್ಕೆ ರಾಜ್ಯ ಸರಕಾರ ಘೋಷಿಸಿರುವ ಪ್ಯಾಕೇಜ್‍ನಲ್ಲಿ ತಮ್ಮನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ ಎಂದು ದೂರಿರುವ ಲೈಂಗಿಕ ಅಲ್ಪಸಂಖ್ಯಾತರು, ಸರಕಾರ ನಮಗೆ ವಿಷ ಕೊಟ್ಟು, ಸಾಯಿಸಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾವು ಮೊದಲಿನಿಂದಲೂ ಶೋಷಣೆಗೆ ಒಳಗಾಗಿದ್ದೇವೆ. ಇದರ ನಡುವೆಯೇ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡು ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದೆವು. ಆದರೆ, ಇದೀಗ ಏಕಾಏಕಿ ಲಾಕ್‍ಡೌನ್ ಪರಿಣಾಮದಿಂದ ಆಹಾರ ಮತ್ತು ಔಷಧ ಕೊರತೆಗೆ ಸಿಲುಕಿಕೊಂಡಿದ್ದೇವೆ. ರಾಜ್ಯ ಸರಕಾರ ತಮ್ಮ ನೆರವಿಗೆ ಬರುವ ವಿಶ್ವಾಸವಿತ್ತು. ಆದರೆ, ಅದು ಸಹ ಹುಸಿಯಾಗಿದೆ ಎಂದು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಬೇಸರ ವ್ಯಕ್ತಪಡಿಸಿದರು.

ರಾಜಧಾನಿ ಬೆಂಗಳೂರಿನಲ್ಲಿಯೇ 18 ಸಾವಿರಕ್ಕೂ ಅಧಿಕ ಲೈಂಗಿಕ ಅಲ್ಪಸಂಖ್ಯಾತರು ನೆಲೆಸಿದ್ದು, ಅನೇಕ ಕಡೆ ಮೂಲಸೌಕರ್ಯಗಳ ಕೊರತೆ ಇದೆ. ಇನ್ನು, ಜನಾಂಗದ ಅನೇಕರು ಕಾಯಿಲೆಗೆ ತುತ್ತಾಗಿದ್ದಾರೆ. ಹೀಗಿರುವಾಗ, ನಮ್ಮ ಪ್ರಾಣ ರಕ್ಷಣೆಗೆ ಸರಕಾರ ಮುಂದಾಗಬೇಕಿತ್ತು. ಆದರೆ, ಏಕಾಏಕಿ ನಮ್ಮನ್ನು ಪ್ಯಾಕೇಜ್‍ನಿಂದಲೇ ಹೊರಗಿಟ್ಟು ಅಪಮಾನ ಮಾಡಿದ್ದಾರೆ ಎಂದು ದೂರಿದರು.

20 ಕೋಟಿ ನೆರವು: ಕೊರೋನ ಲಾಕ್‍ಡೌನ್ ಪ್ರಾಥಮಿಕ ಹಂತದಲ್ಲೇ, ಶ್ರಮಿಕವರ್ಗವಾಗಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ 20 ಕೋಟಿ  ರೂ.ನೆರವು ಒದಗಿಸಬೇಕೆಂದು ಸರಕಾರದ ಮಟ್ಟಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇದಕ್ಕೆ ಯಾವ ಸ್ಪಂದನೆಯೂ ದೊರೆತಿಲ್ಲ ಎನ್ನುವುದು ಗೊತ್ತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯುವ ವಾತಾವರಣ ಇಲ್ಲ. ಸರಕಾರವೇ ಇದನ್ನು ಅರ್ಥ ಮಾಡಿಕೊಂಡು ತುರ್ತು ನೆರವಿಗೆ ಧಾವಿಸಬೇಕೆಂದು ಅಕ್ಕೈ ಪದ್ಮಶಾಲಿ ಆಗ್ರಹಿಸಿದರು.

"ರಾಜ್ಯ ವ್ಯಾಪ್ತಿಯಲ್ಲಿ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ತೃತೀಯ ಲಿಂಗಿಗಳಿದ್ದು, ಬಹುತೇಕರು ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸರಕಾರ ನಮ್ಮ ನೆರವಿಗೆ ಧಾವಿಸಲಿದೆ ಎಂದೇ ನಾವು ನಂಬಿದ್ದೆವು. ಆದರೆ, ಸರಕಾರವೇ ನಮ್ಮನ್ನು ಶ್ರಮಿಕರಲ್ಲ ಎಂದು ಹೊರಗಿಟ್ಟು, ಪ್ಯಾಕೇಜ್ ಘೋಷಿಸಿರುವುದು ಸರಿಯಲ್ಲ ಎಂದು ಮಂಗಳಾಮುಖಿ ರಾಧಕ್ಕ ನುಡಿದರು.

ಭಿಕ್ಷಾಟನೆಯನ್ನೇ ನಂಬಿದ್ದೆ

ಇಲ್ಲಿನ ಬೈಯಪ್ಪನಹಳ್ಳಿಯ ಮುಖ್ಯರಸ್ತೆಯಲ್ಲಿಯೇ ದಿನನಿತ್ಯ ಭಿಕ್ಷಾಟನೆ ನಡೆಸುತ್ತಿದ್ದೆ. ದಿನಕ್ಕೆ 200 ರಿಂದ 300 ರೂ. ಪಡೆದು ಜೀವನ ಸಾಗಿಸುತ್ತಿದ್ದೆ. ಆದರೆ, ಕಳೆದ 40 ದಿನಗಳಿಂದ ರಸ್ತೆಯಲ್ಲವೂ ಖಾಲಿ ಖಾಲಿಯಾಗಿದೆ. ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇಂತಹ ಜನರನ್ನು ಗುರುತಿಸಿ ಸರಕಾರ ನೆರವು ನೀಡಬೇಕು ಅಲ್ಲವೇ ಎಂದು ಮಂಗಳಾಮುಖಿ ಶಾಂತಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News