ಕೊರೋನ ಸಂಪೂರ್ಣ ಇಲ್ಲವಾದರೆ ಮಾತ್ರ ಧಾರ್ಮಿಕ ಕೇಂದ್ರಗಳು ಪ್ರಾರಂಭ: ಅಬ್ದುಲ್ ಅಝೀಮ್

Update: 2020-05-07 17:06 GMT

ಬೆಂಗಳೂರು, ಮೇ 7: ಕೊರೋನ ಸೋಂಕಿತರ ಸಂಖ್ಯೆ ಸಂಪೂರ್ಣ ತಗ್ಗಿದರೆ ಮಾತ್ರ, ಧಾರ್ಮಿಕ ಕೇಂದ್ರಗಳು ಪ್ರಾರಂಭ ಆಗಲು ಸಾಧ್ಯ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ತಿಳಿಸಿದರು.

ಗುರುವಾರ ಇಲ್ಲಿನ ವಿವಿ ಗೌಪುರ ಕಟ್ಟಡದಲ್ಲಿನ ಅಲ್ಪಸಂಖ್ಯಾತರ ಆಯೋಗದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನ ಸೋಂಕು ಸಂಪೂರ್ಣವಾಗಿ ತಗ್ಗಬೇಕು. ಆಗ ಮಾತ್ರ ಧಾರ್ಮಿಕ ಕೇಂದ್ರಗಳಾದ ದೇವಾಲಯ, ಮಸೀದಿ, ದರ್ಗಾ, ಚರ್ಚ್ ಸೇರಿದಂತೆ ಇನ್ನಿತರೆ ಸಮುದಾಯಗಳ ಪ್ರಾರ್ಥನಾಲಯಗಳನ್ನು ಆರಂಭಿಸಿಲು ಸಾಧ್ಯ. ಅಲ್ಲಿಯವರೆಗೂ ನಾವು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕೆಂದು ತಿಳಿಸಿದರು.

ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಾಕ್‍ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ಯಾಕೇಜ್ ಘೋಷಣೆ ಮಾಡಿರುವುದು ಸಂತಸ ತಂದಿದ್ದು, ಇದರಿಂದ ಬಹುತೇಕ ಬಡಕುಟುಂಬಗಳಿಗೆ ನೆರವು ದೊರೆಯಲಿದೆ ಎಂದು ಅವರು ನುಡಿದರು.

ವಲಸಿಗ ಕಾರ್ಮಿಕರ ಹಿತರಕ್ಷಣೆಗಾಗಿ ಆಯೋಗವು ಬದ್ಧವಾಗಿದ್ದು, ಕೆಲ ಕಡೆ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿರುವ ಕಾರ್ಮಿಕರಿಗೆ ನೆರವು ಒದಗಿಸಲಾಗುತ್ತಿದೆ ಎಂದ ಅವರು, ಕೊರೋನ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News