ಸರಕಾರದ ವಿತಂಡ ವಾದಕ್ಕೆ ನಮ್ಮ ಬಳಿ ಉತ್ತರವಿಲ್ಲ: ಸಚಿವ ಬೊಮ್ಮಾಯಿಗೆ ಕೃಷ್ಣಭೈರೇಗೌಡ ತಿರುಗೇಟು

Update: 2020-05-07 17:07 GMT

ಬೆಂಗಳೂರು, ಮೇ 7: ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳುಹಿಸುವ ಯಾವುದೇ ವಿಶೇಷ ರೈಲುಗಳನ್ನು ರದ್ದುಗೊಳಿಸಿಲ್ಲ. ಕಾಂಗ್ರೆಸ್‍ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ತೀರುಗೇಟು ನೀಡಿರುವ ಮಾಜಿ ಸಚಿವ, ಹಾಲಿ ಶಾಸಕ ಕೃಷ್ಣಭೈರೇಗೌಡ ಅವರು ಸಿಎಂ ಅವರೇ ರೈಲುಗಳನ್ನು ರದ್ದುಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದು, ವಿತಂಡ ವಾದಕ್ಕೆ ನಮ್ಮ ಬಳಿ ಉತ್ತರವಿಲ್ಲ ಎನ್ನುವ ಮೂಲಕ ಸಚಿವರನ್ನು ಕುಟುಕಿದ್ದಾರೆ.

ಗುರುವಾರ ವಾರ್ತಾ ಭಾರತಿ ಪತ್ರಿಕೆಯೊಂದಿಗೆ ಮಾತನಾಡಿದ ಕೃಷ್ಣಭೈರೇಗೌಡ ಅವರು, ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳುಹಿಸಲು ತಮಗೆ ರೈಲುಗಳ ಅವಶ್ಯಕತೆ ಇಲ್ಲ ಎಂದು ಸರಕಾರ ರೈಲ್ವೆ ಇಲಾಖೆಗೆ ಪತ್ರ ಬರೆದಿತ್ತು. ಸಿಎಂ ಬಿಎಸ್‍ವೈ ಅವರೂ ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗುವುದು ಎಂಬ ಹೇಳಿಕೆಯನ್ನು ನೀಡಿದ್ದರು. ಆದರೂ ಸಚಿವ ಬೊಮ್ಮಾಯಿ ಅವರು ಕಾಂಗ್ರೆಸ್ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿ ಅವರು ಬೆಳ್ಳಗೆ ಇರುವುದನ್ನು ಕಪ್ಪು ಎಂದು ವಾದ ಮಾಡುತ್ತಾರೆ, ಅವರ ವಿತಂಡ ವಾದಕ್ಕೆ ನಮ್ಮ ಬಳಿ ಉತ್ತರವಿಲ್ಲ ಎಂದು ಹೇಳಿದರು.

ಎರಡು ದಿನಗಳ ಹಿಂದೆ ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಹೇಳಿಕೆ ನೀಡಿತ್ತು. ಇಂದು(ಮೇ 7) ನಾವು ಕಾರ್ಮಿಕರನ್ನಾಗಲಿ, ರೈಲನ್ನಾಗಲಿ ತಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶುಕ್ರವಾರ ಮತ್ತು ಶನಿವಾರ ಎರಡು ರೈಲುಗಳು ಬೇರೆ ರಾಜ್ಯಗಳಿಗೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತವೆ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಇವರ ಹೇಳಿಕೆಗಳಿಗೆ ಏನು ಹೇಳಬೇಕೋ ಎನ್ನುವುದು ನನಗೆ ಗೋತ್ತಾಗುತ್ತಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News