ವಿ‘ಶೋಕ’ ಪಟ್ಟಣ: ರಾಸಾಯನಿಕ ಸ್ಥಾವರವೆಂಬ ಸೆರಗಿನ ಕೆಂಡ

Update: 2020-05-08 08:26 GMT

ಇಡೀ ದೇಶ ಕೊರೋನ ತಂದಿಟ್ಟ ಅನಾಹುತಗಳ ಎದುರಿಸುವ ದಾರಿ ತಿಳಿಯದೆ ಕಂಗಾಲಾಗಿ ಕುಳಿತಿರುವ ಹೊತ್ತಿನಲ್ಲೇ, ನೆರೆಯ ಆಂಧ್ರದಿಂದ ಇನ್ನೊಂದು ವಿಪತ್ತು ಎರಗಿದೆ. ಕೊರೋನ ವೈರಸ್ ಸೃಷ್ಟಿಯಾಗಿರುವುದು ಮನುಷ್ಯರಿಂದ ಹೌದೋ ಅಲ್ಲವೋ ಎನ್ನುವುದು ಇನ್ನೂ ಚರ್ಚೆಯಲ್ಲಿದೆ. ಆದರೆ ಆಂಧ್ರ ಪ್ರದೇಶದ ವಿಶಾಖಪಟ್ಟಣದ ವಿಪತ್ತು ಮನುಷ್ಯನ ಸ್ವಯಂಕೃತಾಪರಾಧ. ಇಲ್ಲಿನ ರಾಸಾಯನಿಕ ಸ್ಥಾವರದಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ ಸುಮಾರು 11 ಮಂದಿ ಮೃತಪಟ್ಟಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಈ ವಿಷಕಾರಿ ರಾಸಾಯನಿಕ ಸೇವನೆ ನೂರಾರು ಮಂದಿಯಲ್ಲಿ ಶಾಶ್ವತ ದುಷ್ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆಗಳಿವೆ ಎಂದು ವೈದ್ಯರು ಶಂಕಿಸಿದ್ದಾರೆ. ನೋಡು ನೋಡುತ್ತಿದ್ದಂತೆಯೇ ಜನಸಾಮಾನ್ಯರು ಈ ಸೋರಿಕೆಯಾದ ಅನಿಲ ಸೇವನೆಯಿಂದ ಬೀದಿಯಲ್ಲಿ ಬಿದ್ದು ಹೊರಳಾಡುತ್ತಿರುವ ದೃಶ್ಯಗಳು ಬೆಚ್ಚಿ ಬೀಳಿಸುವಂತಿವೆ. ಕೊರೋನದ ಮರೆಯಲ್ಲೇ ಈ ದೇಶವನ್ನು ಮುಕ್ಕಿ ತಿನ್ನಲು ಹೊಂಚು ಹಾಕಿ ಕೂತಿರುವ ಭಯಾನಕ ‘ರಾಸಾಯನಿಕ ವೈರಸ್’ ಗಳ ಬೃಹತ್ ರೂಪವನ್ನು ಈ ಘಟನೆ ಬಯಲಿಗೆ ತಂದಿದೆ. ದುರಂತವೆಂದರೆ ವಿಶಾಖ ಪಟ್ಟಣದ ದುರ್ಘಟನೆಗೂ ಲಾಕ್‌ಡೌನ್‌ನ್ನು ದೂರಲಾಗುತ್ತಿದೆ. ಲಾಕ್‌ಡೌನ್ ಕಾರಣದಿಂದ ಸ್ಥಾವರದ ಉಸ್ತುವಾರಿ ನೋಡಿಕೊಳ್ಳಬೇಕಾಗಿರುವ ಸಿಬ್ಬಂದಿ ಹಾಜರಾಗಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದ ಅಂಶ. ರಾಸಾಯನಿಕ ಸ್ಥಾವರಗಳೆಂದರೆ ಮಡಿಲಲ್ಲಿ ಕಟ್ಟಿಕೊಂಡ ಕೆಂಡ. ಸೂಕ್ತ ಭದ್ರತೆಯ ಭರವಸೆಗಳನ್ನು ನೀಡಿದ ಬಳಿಕವೇ ಇಂತಹ ಸ್ಥಾವರಗಳಿಗೆ ಅನುಮತಿ ನೀಡಲಾಗುತ್ತದೆ.

ಅದೆಂತಹ ಲಾಕ್‌ಡೌನ್ ಇದ್ದರೂ, ಭದ್ರತೆಗೆ ಸಂಬಂಧಪಟ್ಟ ವಿಷಯವನ್ನು ಕಂಪೆನಿ ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ, ಈ ರಾಸಾಯನಿಕ ಸ್ಥಾವರಗಳು ಯಾವುದೇ ಕೊರೋನ ವೈರಸ್‌ಗಳಿಗಿಂತ ಅಪಾಯಕಾರಿ. ಒಂದೊಮ್ಮೆ ಇವು ಸ್ಫೋಟಗೊಂಡದ್ದೇ ಆದಲ್ಲಿ ಅದನ್ನು ಯಾವ ಲಾಕ್‌ಡೌನ್ ಮೂಲಕವೂ ತಡೆಯಲು ಸಾಧ್ಯವಿಲ್ಲ. ಈ ಹಿಂದೆ ಮಧ್ಯಪ್ರದೇಶದ ಭೋಪಾಲ್ ದುರಂತದಲ್ಲಿ ಸಂಭವಿಸಿದ ಸಾವು ನೋವುಗಳಿಂದ ನಾವು ಇನ್ನೂ ಪಾಠ ಕಲಿತಿಲ್ಲ ಎನ್ನುವ ಅಂಶವನ್ನು ವಿಶಾಖಪಟ್ಟಣದ ದುರಂತ ಹೇಳುತ್ತಿದೆ. ಭೋಪಾಲ್ ಅನಿಲ ದುರಂತ 20ನೇ ಶತಮಾನದ ವಿಶ್ವದ ಅತಿ ಭೀಕರ ದುರ್ಘಟನೆ ಎಂದು ವಿಶ್ವಸಂಸ್ಥೆ ಬಣ್ಣಿಸಿದೆ. ಭೋಪಾಲ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಯೂನಿಯನ್ ಕಾರ್ಬೈಡ್ ಕಂಪೆನಿ ಘಟಕದಲ್ಲಿ 1984ರಂದು ಈ ದುರಂತ ನಡೆಯಿತು. ಈ ದುರಂತದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಮಾತ್ರವಲ್ಲ, ಆರು ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಹಲವರು ಅಂಗಹೀನರಾಗಿ ಬದುಕ ಬೇಕಾಯಿತು. ಆ ಘಟನೆ ನಡೆದ ಆನಂತರದ ತಲೆಮಾರು ಕೂಡ ದುರಂತದ ಫಲಾನುಭವಿಯಾಯಿತು. ಘಟನೆ ನಡೆದು 35 ವರ್ಷಗಳು ಕಳೆದಿದೆಯಾದರೂ ಇಂದಿಗೂ ಸಂತ್ರಸ್ತರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಭೋಪಾಲ್‌ನಲ್ಲಿ ಇತ್ತೀಚೆಗೆ ಮೃತಪಟ್ಟ ಐವರು ಕೊರೋನ ಸೋಂಕಿತರು ಕೂಡ ಅನಿಲ ದುರಂತದ ಸಂತ್ರಸ್ತರು ಎನ್ನುವುದು ಗಮನಾರ್ಹ. ಬಹುಶಃ ಭಾರತದ ಇತಿಹಾಸದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳೂ ಇಷ್ಟೊಂದು ಭೀಕರತೆಯನ್ನು ಪ್ರದರ್ಶಿಸಿಲ್ಲ. ಇದೇ ಸಂದರ್ಭದಲ್ಲಿ ದುರಂತಕ್ಕೆ ಕಾರಣವಾದ ವಿದೇಶಿ ಕಂಪೆನಿಯ ಮುಖ್ಯಸ್ಥನನ್ನು ಅಂದಿನ ಸರಕಾರವೇ ರಕ್ಷಿಸಿತು.

ಇಪ್ಪತ್ತಾರು ವರ್ಷಗಳ ಕಾಲ ನಡೆದ ಅಪರಾಧ ವಿಚಾರಣೆಯಲ್ಲಿ ಭೋಪಾಲದ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಯೂನಿಯನ್ ಕಾರ್ಬೈಡ್ ಕಂಪೆನಿ ಇಂಡಿಯಾದ ಚೇರ್ಮನ್ ಕೇಶವ್ ಮಹೇಂದ್ರ ಹಾಗೂ ಇತರ ಆರು ಆರೋಪಿಗಳಿಗೆ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಲಾಯಿತು. ಆದರೆ ನಿಜವಾದ ಆರೋಪಿಗಳಿಗೆ ಯಾವ ಶಿಕ್ಷೆಯೂ ಆಗಲಿಲ್ಲ. ಕಂಪೆನಿಯ ಸಿಇಒ ವಾರೆನ್ ಅಂಡರ್ಸನ್ ಅವರನ್ನು ಸರಕಾರದ ನೇತೃತ್ವದಲ್ಲೇ ವಿದೇಶಕ್ಕೆ ರವಾನಿಸಲಾಯಿತು ಎಂಬ ಆರೋಪವಿದೆ. ಅಷ್ಟೇ ಅಲ್ಲ, ಯಾವುದೇ ಗಂಭೀರ ಮೊಕದ್ದಮೆಗಳನ್ನು ಕಂಪೆನಿಯ ಮೇಲೆ ದಾಖಲಿಸದ ಕಾರಣದಿಂದ ನ್ಯಾಯವಾದ ಪರಿಹಾರ ನೀಡುವ ಹೊಣೆಗಾರಿಕೆಯಿಂದಲೂ ಕಂಪೆನಿ ನುಣುಚಿಕೊಂಡಿತು. ದುಡ್ಡು ಬಾಚಿಕೊಂಡದ್ದು ವಿದೇಶಿ ಕಂಪೆನಿಯಾದರೆ,ಅದು ಹೊರ ಬಿಟ್ಟ ವಿಷವನ್ನು ಇಂದಿಗೂ ಕುಡಿಯುತ್ತಿರುವುದು ಸ್ಥಳೀಯ ನಿವಾಸಿಗಳು. ಆದರೆ ಈ ದುರಂತದಿಂದ ಅಣುಸ್ಥಾವರಗಳ ಕುರಿತಂತೆ ಸರಕಾರ ಜಾಗೃತವಾಗಲಿಲ್ಲ. ಯುಪಿಎ ಸರಕಾರದ ಕಾಲದಲ್ಲೇ, ಅಣುವಿದ್ಯುತ್ ಸ್ಥಾವರಗಳನ್ನು ಭಾರತ ಅತ್ಯುತ್ಸಾಹದಿಂದ ಆಹ್ವಾನಿಸಿತು. ಅದಕ್ಕೆ ಸರಕಾರ ನೀಡಿದ ಒಂದೇ ಒಂದು ಸಮರ್ಥನೆ ವಿದ್ಯುತ್ ಕ್ಷಾಮ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ತಿರಸ್ಕೃತಗೊಂಡಿರುವ ಹಲವು ಕಂಪೆನಿಗಳು ಭಾರತದ ಕಡೆಗೆ ಈಗಾಗಲೇ ಧಾವಿಸಿವೆ. ಆದರೆ ದುರಂತಗಳು ಸಂಭವಿಸಿದರೆ ಅದನ್ನು ತಾಳಿಕೊಳ್ಳುವ ಶಕ್ತಿ ನಮ್ಮ ಸರಕಾರಕ್ಕಿದೆಯೇ ಎಂಬ ಪ್ರಶ್ನೆಗೆ ಆನಂತರದ ಯಾವುದೇ ಸರಕಾರ ಉತ್ತರವನ್ನು ಕಂಡುಕೊಂಡಿಲ್ಲ. ಭಾರೀ ದುರಂತಗಳು ಸಂಭವಿಸಿದರೆ ಸಂತ್ರಸ್ತರಿಗೆ ಕೊಡಬೇಕಾದ ಪರಿಹಾರದ ಶರತ್ತುಗಳ ಬಗ್ಗೆ ಸರಕಾರ ಸಂಪೂರ್ಣ ನಿರ್ಲಕ್ಷ ವಹಿಸುತ್ತಾ ಬಂದಿದೆ.

ಭೋಪಾಲ್‌ನಲ್ಲೂ ಈ ಕಾರಣದಿಂದಲೇ ಸಂತ್ರಸ್ತರು ಸೂಕ್ತ ಪರಿಹಾರವನ್ನು ಪಡೆಯದೇ ಹೋದರು. ಅವರು ಕಳೆದುಕೊಂಡದ್ದಕ್ಕೆ ಹೋಲಿಸಿದರೆ ಅವರಿಗೆ ಸಿಕ್ಕಿದ ಪರಿಹಾರ ಅತ್ಯಲ್ಪ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ವಿಶ್ವದ ಶಕ್ತಿಗಳೆಲ್ಲ ಒಂದಾಗಿ ಒತ್ತಡ ಹೇರಿದರೂ ಕಂಪೆನಿ ಪರಿಹಾರವಾಗಿ ಕೊಟ್ಟದ್ದು 3,000 ಕೋಟಿ ರೂಪಾಯಿ ಮಾತ್ರ. ಮೃತರ ಸಂಖ್ಯೆ 3,000 ಎನ್ನುವುದರ ಆಧಾರದಲ್ಲಿ ಈ ಪರಿಹಾರವನ್ನು ನಿರ್ಧರಿಸಲಾಯಿತು. ಆದರೆ ಆ ಬಳಿಕವೂ ಭೋಪಾಲ್‌ನಲ್ಲಿ ನಿರಂತರ ಸಾವುಗಳು ಸಂಭವಿಸುತ್ತಲೇ ಹೋದವು. 2005ರಲ್ಲಿ ಭಾರತ-ಅಮೆರಿಕ ಅಣು ಒಪ್ಪಂದದ ಬಳಿಕ ಹಲವು ರಾಸಾಯನಿಕ ಸ್ಥಾವರಗಳು ಭಾರತಕ್ಕೆ ಕಾಲಿಟ್ಟಿವೆ. ಪರಿಸರ ಮಾಲಿನ್ಯ, ವಿಕಿರಣ ಇನ್ನಿತರ ಕಾರಣಗಳಿಂದ ಅವುಗಳು ಸುದ್ದಿ ಮಾಡುತ್ತಲೇ ಇವೆ. ಸರಕಾರ ಪೊಲೀಸ್ ಶಕ್ತಿಯ ಮೂಲಕ ಪ್ರತಿಭಟನಾಕಾರರ ಧ್ವನಿಯನ್ನು ಮಟ್ಟ ಹಾಕುತ್ತಿದೆೆ. ಪರಿಸರ ಸಂಘಟನೆಗಳು ಇಂತಹ ಸ್ಥಾವರಗಳ ವಿರುದ್ಧ ಧ್ವನಿಯೆತ್ತಿದರೆ ಅವರನ್ನು ‘ದೇಶದ್ರೋಹಿಗಳು’, ‘ಅಭಿವೃದ್ಧಿ ವಿರೋಧಿಗಳು’ ಎಂದು ಸರಕಾರವೇ ಹಣೆಪಟ್ಟಿ ಕಟ್ಟಿ ಜೈಲಿಗೆ ತಳ್ಳುತ್ತದೆ. ಪರಿಣಾಮವಾಗಿ ಇಂತಹ ವಿದೇಶಿ ಕಂಪೆನಿಗಳ ಬೇಜವಾಬ್ದಾರಿಗಳನ್ನು ಪ್ರಶ್ನಿಸುವವರೇ ಇಲ್ಲ ಎಂಬಂತಾಗಿದೆ.

ಒಂದನ್ನಂತೂ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಇಂತಹ ರಾಸಾಯನಿಕ ಸ್ಥಾವರಗಳು ನಾವು ನಮ್ಮದೇ ಮಡಿಲಲ್ಲಿ ಕಟ್ಟಿಕೊಂಡ ಸೆರಗಿನ ಕೆಂಡಗಳು. ವಿಶಾಖ ಪಟ್ಟಣದಲ್ಲಿ ಸಂಭವಿಸಿರುವುದು ಕೂಡಂಕುಲಂನಲ್ಲಿ, ಕೈಗಾದಲ್ಲಿ ಅಷ್ಟೇ ಯಾಕೆ ದಕ್ಷಿಣ ಕನ್ನಡ ಜಿಲ್ಲೆಯ ಎಂಆರ್‌ಪಿಎಲ್‌ನಲ್ಲೂ ಸಂಭವಿಸಬಹುದು. ಇಂದು ನಮ್ಮನ್ನು ನಾಶ ಮಾಡಲು ಶತ್ರು ರಾಷ್ಟ್ರಗಳ ಅಣುಬಾಂಬ್‌ಗಳ ಅಗತ್ಯವಿಲ್ಲ. ನಾವು ಸೆರಗಲ್ಲಿ ಕಟ್ಟಿಕೊಂಡ ಈ ಸ್ಥಾವರಗಳೇ ಸಾಕು. ಕಂಪೆನಿಯ ಬೇಜವಾಬ್ದಾರಿಯಿಂದಲೇ ಅನಿಲ ಸೋರಿಕೆಯಾಗಬೇಕಾಗಿಲ್ಲ, ಕೆಲವೊಮ್ಮೆ ಪ್ರಕೃತಿ ವಿಕೋಪಗಳೂ ಈ ಸ್ಥಾವರದಲ್ಲಿ ದುರಂತ ಸೃಷ್ಟಿಯಾಗಲು ಕಾರಣವಾಗಬಹುದು. ವಿಶಾಖ ಪಟ್ಟಣದಲ್ಲಿ ಸಂಭವಿಸಿರುವ ಭದ್ರತಾ ಲೋಪವನ್ನು ಗಂಭೀರವಾಗಿ ಸ್ವೀಕರಿಸಿ, ಆ ಕಂಪೆನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಭವಿಷ್ಯದಲ್ಲಿ ನಮ್ಮ ಸ್ಥಿತಿ ಭಸ್ಮಾಸುರನಂತಾಗಬಹುದು. ನಮ್ಮ ನೆತ್ತಿಯ ಮೇಲೆ ನಾವೇ ಕೈಯಿಟ್ಟು ಬೂದಿಯಾಗುವ ಮೂರ್ಖತನ ನಡೆಯದಿರಲಿ. ಸರಕಾರ ಈ ನಿಟ್ಟಿನಲ್ಲಿ ಇನ್ನಾದರೂ ಜಾಗೃತವಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News