5,231 ರೈಲು ಬೋಗಿಗಳು ಈಗ ಕೋವಿಡ್ ಆರೈಕೆ ಕೇಂದ್ರಗಳು!

Update: 2020-05-08 04:46 GMT

ಹೊಸದಿಲ್ಲಿ, ಮೇ 8: ದೇಶದಲ್ಲಿ ಕಳೆದ ಕೆಲ ದಿನಗಳಲ್ಲಿ ಕೊರೋನ ಸೋಂಕು ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ 5,231 ಬೋಗಿಗಳನ್ನು ಕೋವಿಡ್-19 ಚಿಕಿತ್ಸಾ ಕೇಂದ್ರಗಳಾಗಿ ಸಜ್ಜುಗೊಳಿಸಿದೆ. ಈ ಬೋಗಿಗಳನ್ನು 23 ರಾಜ್ಯಗಳಿಗೆ ನಿಯೋಜಿಸಬಹುದಾಗಿದ್ದು, ದಿಲ್ಲಿ, ಮುಂಬೈ, ಕೊಲ್ಕತ್ತಾ, ನಾಗ್ಪುರ, ಪುಣೆ ಮತ್ತು ಲಕ್ನೊ ಸೇರಿದಂತೆ ಎಲ್ಲ ಪ್ರಮುಖ ನಗರಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.

ಒಟ್ಟು 85 ರೈಲು ನಿಲ್ದಾಣಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ರೈಲ್ವೆ ಮುಂದಾಗಿದ್ದು, ಇನ್ನು 130 ರೈಲು ನಿಲ್ದಾಣಗಳಲ್ಲಿ ಸಿಬ್ಬಂದಿ ಮತ್ತು ಅಗತ್ಯ ಔಷಧಿಗಳನ್ನು ಪೂರೈಸಿ, ರಾಜ್ಯ ಸರ್ಕಾರಗಳು ಮನವಿ ಮಾಡಿಕೊಂಡರೆ ರೈಲು ಬೋಗಿಗಳನ್ನು ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿ ಪರಿವರ್ತಿಸಲು ಅವಕಾಶವಿದೆ ಎಂದು ರೈಲ್ವೆ ಹೇಳಿದೆ. ರೈಲ್ವೆ ಇಲಾಖೆ ಈಗಾಗಲೇ 2,500ಕ್ಕೂ ಹೆಚ್ಚು ವೈದ್ಯರು ಹಾಗೂ 35 ಸಾವಿರಕ್ಕೂ ಅಧಿಕ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಕೋವಿಡ್-19 ಚಿಕಿತ್ಸಾ ಕಾರ್ಯಕ್ಕೆ ನಿಯೋಜಿಸಿದೆ.

ಆರೋಗ್ಯ ಸಚಿವಾಲಯದ ಮಾರ್ಗಸೂಚಿಯ ಅನ್ವಯ ತೀರಾ ಲಘು ಸ್ವರೂಪದ ಪ್ರಕರಣಗಳಿಗೆ ಬೋಗಿಗಳನ್ನು ಬಳಸಬಹುದಾಗಿದೆ. ರಾಜ್ಯಗಳಲ್ಲಿ ಹಾಲಿ ಇರುವ ಸೌಲಭ್ಯಗಳು ಭರ್ತಿಯಾದ ಸಂದರ್ಭದಲ್ಲಿ ಇವುಗಳನ್ನು ಬಳಸಿಕೊಳ್ಳಬಹುದಾಗಿದ್ದು, ಶಂಕಿತ ಹಾಗೂ ದೃಢಪಟ್ಟ ಕೋವಿಡ್ ಪ್ರಕರಣಗಳಲ್ಲಿ ರೋಗಿಗಳನ್ನು ಪ್ರತ್ಯೇಕವಾಗಿ ಇಡುವ ಸಲುವಾಗಿ ಈ ವ್ಯವಸ್ಥೆ ನೆರವಾಗಲಿದೆ ಎಂದು ರೈಲ್ವೆ ವಕ್ತಾರರು ಹೇಳಿದ್ದಾರೆ.

ಪ್ರಕರಣಗಳ ಸಂಖ್ಯೆ ದಿಢೀರನೇ ಹೆಚ್ಚಳವಾದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಸಲುವಾಗಿ 215 ರೈಲು ನಿಲ್ದಾಣಗಳಲ್ಲಿ ಬೋಗಿಗಳನ್ನು ನಿಲುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 158 ನಿಲ್ದಾಣಗಳಲ್ಲಿ ನೀರು ಪೂರೈಕೆ ವ್ಯವಸ್ಥೆ ಹಾಗೂ ಚಾರ್ಜಿಂಗ್ ಸೌಲಭ್ಯ ಇದ್ದು, ಉಳಿದ 57 ಕೇಂದ್ರಗಳಲ್ಲಿ ನೀರಿನ ಸೌಕರ್ಯವಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News