×
Ad

ಮದ್ಯ ಮಾರಾಟಕ್ಕೆ ಅವಕಾಶ ದೊಡ್ಡ ಅನಾಹುತಕ್ಕೆ ಕಾರಣ: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್

Update: 2020-05-08 18:35 IST

ಬೆಂಗಳೂರು, ಮೇ 8: ರಾಜ್ಯ ಸರಕಾರ ಲಾಕ್‍ಡೌನ್ ಅನ್ನು ಸಡಿಲಗೊಳಿಸಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಬರೆದಿರುವ ಪತ್ರದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ಕೋವಿಡ್ ಹೆಚ್ಚು ಹರಡದಿರುವ ಸಂದರ್ಭದಲ್ಲಿ ಲಾಕ್‍ಡೌನ್ ಮಾಡಿ, ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಲಾಕ್‍ಡೌನ್ ತೆರವುಗೊಳಿಸಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದು ತುಂಬಾ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎಂದು ಅವರು ಹೇಳಿದ್ದಾರೆ.

ಜನರು ಯಾವುದೇ ಸುರಕ್ಷಿತ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ಉದ್ಯೋಗವಿಲ್ಲದ ಕಾರಣ ಯಾರ ಬಳಿಯೂ ಹಣ ಇಲ್ಲ. ಬಡ ಹಾಗೂ ಕೂಲಿ ಕಾರ್ಮಿಕರು ಮದ್ಯದ ಅಂಗಡಿಗಳಲ್ಲಿ ಸಾಲು ನಿಂತಿದ್ದಾರೆ. ಕೂಡಿಟ್ಟಿರುವ ಹಣವನ್ನು ಮದ್ಯಪಾನದ ಮೇಲೆ ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ಹೆಚ್ಚು ಸಮಸ್ಯೆ ಉಂಟಾಗಿದೆ ಎಂದು ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರಕಾರ ಲಾಕ್‍ಡೌನ್ ಘೋಷಣೆ ಮಾಡಿದ ಆರಂಭಿಕ ದಿನಗಳಲ್ಲಿ ನಿರ್ದಿಷ್ಟ ಸಮಯ ಮದ್ಯ ಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರೆ ಇಂದು ಈ ರೀತಿ ಗುಂಪಾಗಿ ಸಾಲುಗಟ್ಟಿ ನಿಲ್ಲುತ್ತಿರಲಿಲ್ಲ. ಸರಕಾರದ ಬೊಕ್ಕಸ ತುಂಬಿಸಿಕೊಳ್ಳುವ ಸಲುವಾಗಿ ಮಹಿಳೆಯರ ಸಂಸಾರವನ್ನು ಪಣಕ್ಕಿಟ್ಟಿದ್ದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದೆ. ಈ ಸಂದರ್ಭದಲ್ಲಿ ಖಜಾನೆಗೆ ನಿಧಿ ಸಂಗ್ರಹ ಮಾಡಲು ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಿ ಉತ್ಪಾದನಾ ವಲಯಕ್ಕೆ ದೊಡ್ಡ ಆಘಾತ ನೀಡಿದ್ದೀರಿ. ಸರಕು ಸಾಗಣೆ ಮತ್ತು ದರಗಳು ಏರಿಕೆಯಾಗಿ ನಾಗರಿಕರು ತೈಲ ಬೆಲೆಯ ಹೊರೆಯಿಂದ ನಲುಗಿ ಹೋಗುತ್ತಾರೆ ಎಂದು ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕವನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ಹೆಚ್ಚಿಸಿದ್ದು ಅಮಾನವೀಯ. ಕೇಂದ್ರಕ್ಕೆ ರಾಜ್ಯದಿಂದ ಪಾವತಿಸಿರುವ ಜಿಎಸ್‍ಟಿಯನ್ನು ತರಲು ಪ್ರಯತ್ನ ಮಾಡಿ ತೈಲ ದರ ಏರಿಕೆ ಕೈ ಬಿಡಲು ಮುಂದಾಗಿ ಎಂದು ಅವರು ಆಗ್ರಹಿಸಿದ್ದಾರೆ.

ಆರೋಗ್ಯ ಅಧಿಕಾರಿಗಳು ಎಚ್ಚರಿಕೆಯಿಲ್ಲದೆ ಸಾರ್ವಜನಿಕರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಗರ್ಭಿಣಿ ಮಹಿಳೆಯೊಬ್ಬರಿಗೆ ಕೋವಿಡ್-19 ಇದೆ ಎಂಬುದಾಗಿ ವರದಿ ಕೊಟ್ಟು ನಂತರ 'ಅಚಾತುರ್ಯದಿಂದ ವರದಿ ಕೊಡಲಾಗಿದೆ, ಆಕೆಗೆ ಕೋವಿಡ್ ಪಾಸಿಟಿವ್ ಇಲ್ಲ' ಎಂದು ತಿಳಿಸಿದ್ದಾರೆ. ಗರ್ಭಿಣಿ ಸ್ತ್ರೀಯ ಮಾನಸಿಕ ಆರೋಗ್ಯದ ಮೇಲೆ ಇದು ಎಂತಹ ಪರಿಣಾಮ ಬೀರುತ್ತದೆ ಎಂದು ಯೋಚಿಸಿ. ಇಂತಹ ನಿರ್ಲಕ್ಷ್ಯದ ಘಟನೆಗಳು ಮುಂದೆ ಸಂಭವಿಸದಂತೆ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಲು ಸಂಬಂಧಪಟ್ಟವರಿಗೆ ಆದೇಶಿಸಬೇಕೆಂದು ಪುಷ್ಪಾ ಅಮರನಾಥ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News