×
Ad

ಭಟ್ಕಳ: ನಾಳೆಯಿಂದ ಕೊರೋನ ಸೋಂಕಿತ ಪ್ರದೇಶ ಸೀಲ್‍ಡೌನ್; ಎಸ್.ಪಿ ಶಿವಪ್ರಕಾಶ

Update: 2020-05-08 19:37 IST

ಭಟ್ಕಳ: ನಗರದ ಮದೀನಾ ಕಾಲೋನಿಯನ್ನು ಕೋವಿಡ್-19 ಹಾಟ್‍ಸ್ಪಾಟ್ ಕ್ಲಸ್ಟರ್ ಎಂದು ಗುರುತಿಸಿದ್ದು, ಇಲ್ಲಿ ಸಂಪೂರ್ಣ ಸೀಲ್‍ಡೌನ್ ಮಾಡಲಾಗುವುದು. ಅಲ್ಲದೆ ಒಂದೆರಡು ದಿನಗಳಲ್ಲಿ ಆರು ಸೋಂಕಿತರು ಪತ್ತೆಯಾಗಿರುವ ಕೋಕ್ತಿನಗರವನ್ನೂ ಸೀಲ್‍ಡೌನ್ ಮಾಡುವ ಕುರಿತು ಚಿಂತನೆ ನಡೆದಿದೆ ಎಂದ ಉ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದರು. 

ಅವರು  ಶುಕ್ರವಾರ ಭಟ್ಕಳದ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 

ಮದೀನಾ ಕಾಲೋನಿಗೆ ಹೋಗಿ ಬರುವ ಎಲ್ಲಾ ಮಾರ್ಗಗಳನ್ನು ಕೂಡಾ ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಪ್ರದೇಶಕ್ಕೆ ಹೋಗಿ ಬರಲು ಒಂದೇ ದಾರಿಯನ್ನು ಇಡಲಾಗುವುದು. ಆ ಪ್ರದೇಶದಿಂದ ಜನರು ಯಾರೂ ಕೂಡಾ ಹೊರಗೆ ಬರಬಾರದು, ಅಲ್ಲಿಗೆ ಯಾರೂ ಹೋಗಬಾರದು ಎಂದು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಭಟ್ಕಳ ನಗರವನ್ನು ಈಗಾಗಲೇ ಕಂಟೈನ್‍ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಅದಕ್ಕಿಂತ ಹೊರಗಿನ ಐದು ಕಿ.ಮಿ. ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಕಂಟೈನ್‍ಮೆಂಟ್ ಜೋನ್‍ಗೆ ಪೂರ್ವದಲ್ಲಿ ರೈಲ್ವೇ ನಿಲ್ದಾಣದ ರಸ್ತೆ, ಪಶ್ಚಿಮಕ್ಕೆ ತಲಗೇರಿ ರಸ್ತೆ, ಉತ್ತರಕ್ಕೆ ವೆಂಕಟಾಪುರ ನದಿ, ದಕ್ಷಿಣಕ್ಕೆ ಮುಂಡಳ್ಳಿ ಗ್ರಾಮದ ಗಡಿ ಭಾಗವೇ ಅಂತಿಮ ಗಡಿಯಾಗಿದ್ದು ಬಫರ್ ಜೋನ್ ಅದರ ಐದು ಕಿ.ಮಿ. ಪ್ಯಾಪ್ತಿಯನ್ನು ಹೊಂದಿದೆ ಎಂದರು. 

ಮದೀನಾ ಕಾಲೋನಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ನೀಡಿದ ಪಾಸ್ ಹಿಂಪಡೆಯಲಾಗುವುದು. ಸರಕಾರಿ ಅಧಿಕಾರಿಯೋರ್ವರ ನೇತೃತ್ವದಲ್ಲಿ ಅಗತ್ಯದ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಜನರು ಸರಕಾರದೊಂದಿಗೆ ಸಹಕಾರ ನೀಡಬೇಕು ಎಂದು ಕೋರಿದ ಅವರು ಸರಕಾರ ನೀಡಿದ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಾರೆಯೇ ವಿನಹ ಜನತೆಯ ಮೇಲೆ ನಮಗೆ ಯಾವುದೇ ಪೂರ್ವಾಗ್ರಹ ಇಲ್ಲ ಎಂದೂ ಅವರು ಹೇಳಿದರು.

ಎರಡು ಕೆ.ಎಸ್.ಆರ್.ಪಿ. ತುಕಡಿ, 200 ರಿಂದ 250 ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗುವುದು ಎಂದರು. 

ಭಟ್ಕಳದ 12ನೇ ಸೋಂಕಿತೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿ ಬಂದ ವಿಚಾರ ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ ಎಂದು ವರದಿಗಾಗರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಆಯುಕ್ತ ಭರತ್ ಎಸ್., ನಮ್ಮಲ್ಲಿ ದಿನಕ್ಕೆ ಬಹಳಷ್ಟು ಪಾಸ್‍ಗಳನ್ನು ಪಡೆದುಕೊಂಡು ಹೋಗುತ್ತಾರೆ ಯಾರು ಎಲ್ಲಿ ಹೋಗುತ್ತಾರೆ ಎಂಬ ವಿಚಾರ ದಾಖಲಿರುತ್ತಾದರೂ ಕೂಡ ಸೂಕ್ತಸಮಯದಲ್ಲಿ ಗಮನಕ್ಕೆ ಬಾರದೆ ಇರಬಹುದು ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News