ಲಾಡ್ಜ್, ಬಾರ್, ಕ್ಲಬ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿ ಅಬಕಾರಿ ಇಲಾಖೆ ಅಧಿಕೃತ ಆದೇಶ

Update: 2020-05-08 14:21 GMT

ಬೆಂಗಳೂರು, ಮೇ 8: ಲಾಡ್ಜ್, ಬಾರ್, ಕ್ಲಬ್‍ಗಳಲ್ಲಿ(ಸಿಎಲ್-4, ಸಿಎಲ್-9 ಮತ್ತು ಸಿಎಲ್-7) ಲಾಕ್‍ಡೌನ್ ಅವಧಿಯ ನಂತರ ಉಳಿದಿರುವ ಮದ್ಯವನ್ನು ಮಾರಾಟ ಮಾಡಲು ನಾಳೆ(ಮೇ 9)ಯಿಂದ ಮೇ 17ರವರೆಗೆ ಅವಕಾಶ ಕಲ್ಪಿಸಿ ಅಬಕಾರಿ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಮತ್ತು ಹೆಚ್ಚಿನ ಮೌಲ್ಯದ ಮದ್ಯ ಮತ್ತು ಬಿಯರ್ ದಾಸ್ತಾನಿದ್ದು, ಆರು ತಿಂಗಳ ಒಳಗೆ ಆ ದಾಸ್ತಾನು ಮಾರಾಟ ಮಾಡಬೇಕಿರುತ್ತದೆ. ಈ ಅವಧಿ ಮುಗಿದ ನಂತರ ಮದ್ಯ ಸೇವನೆಗೆ ಯೋಗ್ಯವಲ್ಲದ ಕಾರಣ ಅನಿವಾರ್ಯವಾಗಿ ನಾಶಪಡಿಸಬೇಕಾಗುತ್ತದೆ. ಹೀಗಾಗಿ ಮೇ 17ರವರೆಗೆ ದಾಸ್ತಾನಿರುವ ಮದ್ಯವನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸೀಲ್ ಮಾಡಿರುವ ಬಾಟಲಿಗಳನ್ನು ಮಾತ್ರ ನಿಗದಿಪಡಿಸಿರುವ ಎಂಆರ್ ಪಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಬೇಕು. ದಾಸ್ತಾನು ಇರುವ ಮದ್ಯವನ್ನು ಸಿಎಲ್-2 ಸನ್ನದ್ದುಗಳಿಗೆ ಸಾಗಾಟ ಮಾಡಬಹುದು. ರೆಸ್ಟೋರೆಂಟ್‍ಗಳಲ್ಲಿ ಗ್ರಾಹಕರಿಗೆ ಊಟ-ತಿಂಡಿ ಕೇವಲ ಪಾರ್ಸಲ್ ರೂಪದಲ್ಲಿ ಮಾತ್ರ ನೀಡಬಹುದು.

ಮೇಲ್ಕಂಡ ಸನ್ನದ್ದುದಾರರು ಹೊಸದಾಗಿ ಕೆಎಸ್‍ಬಿಸಿಎಲ್ ಡಿಪೋದಿಂದ ಮದ್ಯ ಖರೀದಿಗೆ ಯಾವುದೇ ಅವಕಾಶ ಇರುವುದಿಲ್ಲ. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಹೊರತುಪಡಿಸಿ ಉಳಿದೆಡೆಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಬಹುದು. ಬೆಳಗ್ಗೆ 9ರಿಂದ ಸಂಜೆ 7ಗಂಟೆಯ ವರೆಗೆ ಮದ್ಯ ಮಾರಾಟಕ್ಕೆ ಅವಕಾಶವಿದೆ. ಸನ್ನದ್ದು ಮಳಿಗೆಯಲ್ಲಿ ಕೇವಲ 5 ಜನ ಗ್ರಾಹಕರಿಗೆ ಮಾತ್ರ ಇರುವಂತೆ ಹಾಗೂ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನೌಕರರು ಮಾಸ್ಕ್ ಧರಿಸಬೇಕು. ಮಾಲ್ ಮತ್ತು ಸೂಪರ್ ಮಾರ್ಕೆಟ್‍ಗಳಲ್ಲಿನ ಸದರಿ ಸನ್ನದ್ದುಗಳು ಇದ್ದಲ್ಲಿ ಈ ಆದೇಶ ಅವರಿಗೆ ಅನ್ವಯ ಆಗುವುದಿಲ್ಲ. ಈ ಆದೇಶವನ್ನು ಅಬಕಾರಿ ಉಪ ಆಯುಕ್ತರು ಪರಿಪೂರ್ಣವಾಗಿ ಜಾರಿ ಮಾಡಬೇಕು. ಆದೇಶ ಉಲ್ಲಂಘಿಸುವ ಸನ್ನದ್ದುಗಳನ್ನು ಅಮಾನತುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅಬಕಾರಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News