ಕಾರ್ಮಿಕರನ್ನು ಕಳುಹಿಸಲು ಸರಕಾರ ಸಿದ್ಧವಿದ್ದರೂ ಆಯಾ ರಾಜ್ಯಗಳು ಒಪ್ಪಿಗೆ ನೀಡಿಲ್ಲ: ಹೈಕೋರ್ಟ್ ಗೆ ಹೇಳಿಕೆ
ಬೆಂಗಳೂರು, ಮೇ 8: ರಾಜ್ಯದಲ್ಲಿರುವ ವಲಸೆ ಕಾರ್ಮಿಕರು ಅವರ ಊರಿಗೆ ಮರಳಲು ಸರಕಾರ ಸಹಕರಿಸುತ್ತಿಲ್ಲ ಎಂಬ ಅರ್ಜಿಗೆ ಸಂಬಂಧಿಸಿದಂತೆ ರೈಲು ಮೂಲಕ ಅವರ ತವರೂರಿಗೆ ಕಳುಹಿಸಲು ಸರಕಾರ ಸಿದ್ಧವಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್ ಗೆ ತಿಳಿಸಿದೆ. ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಕಾರ್ಮಿಕರನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಆಯಾ ಸರಕಾರಗಳಿಗೆ ಪತ್ರ ಬರೆಯಲಾಗಿದೆ. ತ್ರಿಪುರ, ಮಣಿಪುರ, ಉತ್ತರಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳ ಸರಕಾರಗಳಿಗೆ ನಮ್ಮ ಸರಕಾರದಿಂದ ಪತ್ರ ಬರೆಯಲಾಗಿದೆ. ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳುಹಿಸಲು ನಮ್ಮ ಸರಕಾರ ಸಿದ್ಧವಿದ್ದರೂ ಆಯಾ ರಾಜ್ಯಗಳು ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಸರಕಾರಿ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಅಲ್ಲದೆ, ಆಯಾ ರಾಜ್ಯ ಸರಕಾರಗಳ ಒಪ್ಪಿಗೆ ಸಿಗದೇ ಕಾರ್ಮಿಕರನ್ನು ಕಳುಹಿಸಲು ಆಗುವುದಿಲ್ಲ. ಒಪ್ಪಿಗೆ ಸಿಕ್ಕ ನಂತರವೇ ರೈಲುಗಳ ಮೂಲಕ ಇಲ್ಲಿಂದ ಕಳುಹಿಸಲಾಗುವುದು ಎಂದು ಪೀಠಕ್ಕೆ ಮಾಹಿತಿ ನೀಡಿದರು. ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಮುಂದೂಡಿತು