ರಸಗೊಬ್ಬರ-ಔಷಧ ಉತ್ಪಾದನೆಯಲ್ಲಿ ಗುರುತರ ಸಾಧನೆ: ಡಿ.ವಿ.ಸದಾನಂದಗೌಡ

Update: 2020-05-08 14:36 GMT

ಹೊಸದಿಲ್ಲಿ, ಮೇ 8: ದೇಶದಲ್ಲಿ ಮಾ.22 ರಿಂದ ಎ.30ರವರೆಗೆ 40 ದಿನಗಳ ಅವಧಿಯಲ್ಲಿ 1,251 ರೇಕ್‍ಗಳಷ್ಟು ರಸಗೊಬ್ಬರ(ಅಂದಾಜು 40 ಲಕ್ಷ ಟನ್) ದೇಶದ ಬೇರೆ ಬೇರೆ ಭಾಗಗಳಿಗೆ ಸಾಗಣೆಯಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಖರೀದಿಸುತ್ತಿದ್ದಾರೆ. ಇಂದು ಎಲ್ಲ ರಾಜ್ಯಗಳಲ್ಲಿಯೂ ತಿಂಗಳ ಸರಾಸರಿ ಬೇಡಿಕೆಗಿಂತ 2 ರಿಂದ 3 ಪಟ್ಟು ಜಾಸ್ತಿ ರಸಗೊಬ್ಬರ ದಾಸ್ತಾನಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಕಳೆದ ತಿಂಗಳು ಒಟ್ಟು 21,115.48 ಕೋಟಿ ರೂ.ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ರಸಗೊಬ್ಬರ ಕಾರ್ಖಾನೆಗೆ ವಾರ್ಷಿಕವಾಗಿ 37.43 ಲಕ್ಷ ಟನ್ ಯೂರಿಯಾ ಉತ್ಪಾದನೆಯ ಗುರಿ ನೀಡಲಾಗಿದೆ. ಅಂದರೆ ತಿಂಗಳಿಗೆ ಸರಾಸರಿ 3.12 ಲಕ್ಷ ಟನ್ ಉತ್ಪಾದನೆ ಮಾಡಬೇಕು. ಸಕಾಲದಲ್ಲಿ ಹಣ ಲಭ್ಯವಾದ್ದರಿಂದ ಎಪ್ರಿಲ್ ತಿಂಗಳಲ್ಲಿ 3.22 ಲಕ್ಷ ಟನ್ ಯೂರಿಯಾ ಉತ್ಪಾದನೆ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.

ಲಾಕ್‍ಡೌನ್ ಅಡಚಣೆಯ ಮಧ್ಯೆಯೆ ನಾವು ಔಷಧ ಉತ್ಪಾದನೆಯಲ್ಲೂ ಗುರುತರ ಸಾಧನೆ ಮಾಡಿದ್ದೇವೆ. ಜಗತ್ತಿನ ಎಲ್ಲ ದೇಶಗಳಿಂದ ಬೇಡಿಕೆಯಲ್ಲಿರುವ ಹೈಡ್ರಾಕ್ಸಿಕ್ಲೊರಾಕ್ವಿನ್ ಮಾತ್ರೆ ಉತ್ಪಾದನೆ ದ್ವಿಗುಣಗೊಳಿಸಲಾಗಿದೆ. ಕಳೆದ ಎಪ್ರಿಲ್ ತಿಂಗಳಲ್ಲಿ 30 ಕೋಟಿ ಮಾತ್ರೆಗಳನ್ನು ಉತ್ಪಾದಿಸಿದ್ದೇವೆ. 15 ಕೋಟಿ ಮಾತ್ರೆಗಳನ್ನು ದೇಶದ ಆಂತರಿಕ ಉಪಯೋಗಕ್ಕೆ ಇಟ್ಟುಕೊಂಡು ಉಳಿದದ್ದನ್ನು(15 ಕೋಟಿ) ರಫ್ತು ಮಾಡಲು ಅವಕಾಶ ನೀಡಲಾಗಿದೆ ಎಂದು ಸದಾನಂದಗೌಡ ತಿಳಿಸಿದ್ದಾರೆ.

ಪ್ಯಾರಸಿಟಮೊಲ್ ಮಾತ್ರೆ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಅದೇ ರೀತಿ ಅಜಿತ್ರೋಮೈಸಿನ್ ಉತ್ಪಾದನೆಯನ್ನೂ ಹೆಚ್ಚಿಸಲಾಗಿದೆ. ಎಪ್ರಿಲ್ ತಿಂಗಳಲ್ಲಿ 500 ಎಂಜಿಯ 15 ಕೋಟಿ ಅಜಿತ್ರೋಮೈಸಿನ್ ಮಾತ್ರೆ ಉತ್ಪಾದನೆಗೊಂಡಿದೆ. ಔಷಧ ಕೊರತೆ, ಹೆಚ್ಚುವರಿ ದರ ವಸೂಲಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ಅದನ್ನು ಬಗೆಹರಿಸಲು ದಿನದ 24 ತಾಸೂ ಕಾರ್ಯನಿರ್ವಹಿಸುವ ನಿಯಂತ್ರಣ ಕೇಂದ್ರ ಸ್ಥಾಪಿಸಿದ್ದೇವೆ. ಸಾರ್ವಜನಿಕರು, ಅಂಗಡಿಕಾರರು ದೂರವಾಣಿ ಸಂಖ್ಯೆ 1800111255ಕ್ಕೆ ಉಚಿತ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಜನೌಷಧ ಕೇಂದ್ರಗಳಿಗೆ ಸುಮಾರು 1.8 ಕೋಟಿ ಹೈಡ್ರೊಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಸರಬರಾಜು ಮಾಡಲಾಗಿದೆ. ಸದ್ಯ 745 ಮಾದರಿಯ ಔಷಧಗಳು ಹಾಗೂ 108 ನಮೂನೆಯ ಶಸ್ತ್ರಚಿಕಿತ್ಸಾ ಉಪಕರಣಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯ ಇವೆ. ಎಪ್ರಿಲ್ ತಿಂಗಳಲ್ಲಿ 52 ಕೋಟಿ ರೂ.ಔಷಧ ಮಾರಾಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಮಾರ್ಗದರ್ಶನದಲ್ಲಿ ನಾವೆಲ್ಲ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅವರ ನಾಯಕತ್ವದಲ್ಲಿ ದೇಶವು ಇದುವರೆಗೂ ಕೊರೋನ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿದೆ. ಆದರೆ, ಈ ಜೈವಿಕ ಯುದ್ಧ ಇನ್ನೂ ಮುಗಿದಿಲ್ಲ. ನಾವು ಯಾರು ಮೈಮರೆಯುವುದು ಬೇಡ. ಇನ್ನಷ್ಟು ಕಾಲ ಕಡ್ಡಾಯವಾಗಿ ಮುಖಗವಸು ಧರಿಸೋಣ. ಸೋಂಕು ನಿವಾರಕ ದ್ರಾವಣ ಬಳಸೋಣ ಎಂದು ಸದಾನಂದಗೌಡ ಕರೆ ನೀಡಿದ್ದಾರೆ.

ನಾಲ್ಕು ಜನ ಸೇರುವ ಸ್ಥಳಗಳಲ್ಲಿ ಕನಿಷ್ಠ ನಾಲ್ಕು ಅಡಿ ಭೌತಿಕ ಅಂತರವನ್ನು ಕಾಪಾಡಿಕೊಳ್ಳುವ ಸಂಕಲ್ಪ ಮಾಡೋಣ. ಜವಾಬ್ದಾರಿಯುತ ನಾಗರಿಕರಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆಗಾಗ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ದೇಶ ಈ ಯುದ್ಧವನ್ನು ಗೆಲ್ಲಬೇಕಾದರೆ ನಿಮ್ಮೆಲ್ಲರ ಸಂಪೂರ್ಣ ಸಹಕಾರ, ಸಹಭಾಗಿತ್ವ ಬೇಕು. ನಮಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲವೂ ಶುಭಾಂತ್ಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News