ಸ್ನೇಹಿತರ ನಡುವೆ ಪ್ರೀತಿ ವಿಚಾರದಲ್ಲಿ ಗಲಾಟೆ: ಮೈಸೂರಿನಲ್ಲಿ ಮತ್ತೊಂದು ಕೊಲೆ
ಮೈಸೂರು,ಮೇ.8: ಕ್ಯಾತಮಾರನಹಳ್ಳಿಯ ಸ್ನೇಹಿತರ ಪ್ರೇಮದ ವಿಚಾರವಾಗಿ ಗುರುವಾರ ರಾತ್ರಿ ಮತ್ತೊಂದು ಜೀವವನ್ನು ಬಲಿ ಪಡೆಯಲಾಗಿದೆ.
ಕೊಲೆಯಾದ ಯುವಕನನ್ನು ಅಭಿ ಎಂದು ಗುರುತಿಸಲಾಗಿದ್ದು, ಈತ ಮೇ.4ರಂದು ಕ್ಯಾತಮಾರನಹಳ್ಳಿಯಲ್ಲಿ ಸತೀಶ್ ಎಂಬ ಯುವಕನನ್ನು ಕೊಲೆಗೈದ ಆರೋಪಿ ಎಂದು ಗುರುತಿಸಲಾದ ಕಿರಣ್ ಎಂಬಾತನ ಸಹೋದರನಾಗಿದ್ದಾನೆ.
ಪ್ರೀತಿಯ ವಿಷಯಕ್ಕಾಗಿ ಸ್ನೇಹಿತರ ನಡುವೆ ಶುರುವಾದ ಜಗಳ ಕಳೆದ ಸೋಮವಾರ ಅಂದರೆ ಮಾರ್ಚ್ 4ರಂದು ರಾತ್ರಿ ಕ್ಯಾತಮಾರನಹಳ್ಳಿಯ ಸತೀಶ್‍ನನ್ನು ಬಲಿ ಪಡೆದಿತ್ತು. ಕೊಲೆಗೈದಿದ್ದ ಕ್ಯಾತಮಾರನಹಳ್ಳಿಯವರೇ ಆದ ಕಿರಣ್, ಮಧು ಎಂಬ ಆರೋಪಿಗಳನ್ನು ಉದಯಗಿರಿ ಪೊಲೀಸರು ಬಂಧಿಸಿದ್ದರು. ಈ ಘಟನೆಯ ಬೆನ್ನಿಗೇ ಸತೀಶನ ಸ್ನೇಹಿತರಾದ ಇರ್ಫಾನ್, ಮಹೇಂದ್ರ ಎಂಬವರು ಗುರುವಾರ ರಾತ್ರಿ, ಕಿರಣ್ ಸಹೋದರ ಅಭಿ ಎಂಬಾತನಿಗೆ ಮೊಬೈಲ್ ಕರೆ ಮಾಡಿ, ಮಾತನಾಡುವುದಿದೆ ಬಾ ಎಂದು ಮನೆಯಿಂದ ಹೊರಗೆ ಕರೆಸಿಕೊಂಡಿದ್ದರು.
ಅಣ್ಣನ ಸ್ನೇಹಿತರ ಮಾತನ್ನು ನಂಬಿದ ಅಭಿ, ಅವರು ಹೇಳಿದಂತೆ ಗಾಯತ್ರಿಪುರಂ ಬಡಾವಣೆಗೆ ಬಂದಿದ್ದು, ತಕ್ಷಣವೇ ಆರೋಪಿಗಳಿಬ್ಬರು ಚಾಕುವಿನಿಂದ ಅಭಿಯನ್ನು ಇರಿದು ಕೊಲೆಗೈದಿದ್ದಾರೆ. ಘಟನೆ ಬಳಿಕ ಉದಯಗಿರಿ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ಓರ್ವರಿಗೆ ಮೊಬೈಲ್ ಕರೆ ಮಾಡಿದ ಆರೋಪಿಗಳು, ಕೊಲೆಗೈದಿರುವ ವಿಷಯವನ್ನು ತಾವೇ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಬಂದ ಕಾನ್ಸಟೇಬಲ್‍ಗೆ ಶವ ತೋರಿಸಿ, ನಜರಬಾದ್ ಪೊಲೀಸರಿಗೆ ಶರಣಾಗಿದ್ದಾರೆ.
ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಈ ಕುರಿತು ಮಾಹಿತಿ ನೀಡಿದ್ದು, ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿಸಿದರು.