ರಾಜ್ಯದಲ್ಲಿರುವ ಅನಿಲ ಘಟಕಗಳ ಮೇಲೆ ಸೂಕ್ಷ್ಮ ನಿಗಾ: ಸಚಿವ ಜಗದೀಶ್ ಶೆಟ್ಟರ್

Update: 2020-05-08 17:29 GMT

ಮೈಸೂರು,ಮೇ.8: ವಿಶಾಖಪಟ್ಟಣಂನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ನಡೆದ ಅನಿಲ ಸೋರಿಕೆ ಘಟನೆಯಿಂದ ರಾಜ್ಯದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಅಲ್ಲದೇ ಅನಿಲ ಘಟಕಗಳ ಮೇಲೆ ಸೂಕ್ಷ್ಮ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಕೈಗಾರಿಕೆಗಳ ಉದ್ಯಮಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಅನಿಲ ಘಟಕಗಳ ಬಗ್ಗೆ ಅಧಿಕಾರಿಗಳು ಸೂಕ್ಷ್ಮ ನಿಗಾ ಇಟ್ಟಿದ್ದಾರೆ. ಅಲ್ಲದೇ ಆಯಾ ಕೈಗಾರಿಕಾಗಳು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಚೀನಾದ ವಿರುದ್ಧ ಹಲವು ದೇಶಗಳು ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲಿರುವ ಕೈಗಾರಿಕೆಗಳನ್ನು ತೆರವುಗೊಳಿಸಲು ಇಚ್ಛೆಪಡುತ್ತಿವೆ. ಈ ಸಂದರ್ಭದಲ್ಲಿ ಅಂತಹ ಕೈಗಾರಿಕೆಗಳನ್ನು ಭಾರತಕ್ಕೆ ಸೆಳೆಯಲಾಗುವುದು. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದರು. ಇನ್ನು ಸಣ್ಣ ಕೈಗಾರಿಕೆಗಳ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದೆ. ಇದಕ್ಕೆ ಕೇಂದ್ರ ವಿಶೇಷವಾಗಿ ಪ್ಯಾಕೇಜ್ ಘೋಷಣೆ ಮಾಡುವ ವಿಶ್ವಾಸವಿದೆ. ಕೈಗಾರಿಕೆಗಳಿಗೆ ಬರುವ ನೌಕರರಿಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಹೇಳಿದರು.

ಜುಬಿಲಿಯಂಟ್ ಕಾರ್ಖಾನೆಯ ನೌಕರನಿಗೆ ಕೊರೋನ ಸೋಂಕು ಹೇಗೆ ತಗುಲಿದೆ ಎಂಬುದರ ಬಗ್ಗೆ ತನಿಖೆ ನಡೆದಿದೆ. ಆದರೆ ಅದರ ಮೂಲ ಸಿಕ್ಕಿಲ್ಲ. ಮುಂದೊಂದು ದಿನ ಸಿಗಲಿದೆ. ತನಿಖೆಗಿಂತ ಮೈಸೂರನ್ನು ಕೊರೋನ ಮುಕ್ತ ಮಾಡುವುದು ನಮ್ಮ ಮೊದಲ ಆದ್ಯತೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News