ರೈಲು ಅಪಘಾತವಲ್ಲ, ವಲಸೆ ಕಾರ್ಮಿಕರ ಹತ್ಯಾಕಾಂಡ!

Update: 2020-05-09 05:07 GMT

ಕೊರೋನ ವೈರಸ್‌ಗಳೂ ಕಣ್ಣೀರಿಡುವಂತಹ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ತಮ್ಮನ್ನು ರೈಲುಗಳ ಮೂಲಕ ಮನೆಗೆ ತಲುಪಿಸಿ ಎಂದು ಗೋಗರೆಯುತ್ತಿದ್ದ ವಲಸೆ ಕಾರ್ಮಿಕರ ಮೇಲೆಯೇ ರೈಲು ಹರಿದು ಹೋಗಿದೆ. ಮನೆ ತಲುಪಬೇಕಾಗಿದ್ದ ಕಾರ್ಮಿಕರು ಮರಳಿ ಬಾರದ ಮನೆಗೆ ತಲುಪಿದ್ದಾರೆ. ಊರು ಸೇರುವ ಕನಸಿನೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ, ಸುಸ್ತಾಗಿ ರೈಲ್ವೆ ಹಳಿಗಳ ಮೇಲೆ ನಿದ್ರಿಸಿದ್ದ 20 ಕಾರ್ಮಿಕರ ಮೇಲೆ ರೈಲು ಹಾದು ಹೋಗಿದೆ. ಸ್ಥಳದಲ್ಲೇ 16 ಮಂದಿ ಮೃತಪಟ್ಟಿದ್ದರೆ, ಉಳಿದ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ರೈಲ್ವೆ ಹಳಿಗಳ ಮೇಲೆ ಬಿದ್ದ ರೊಟ್ಟಿ, ಹರಿದ ನೂರರ ನೋಟುಗಳು ಲಾಕ್‌ಡೌನ್‌ನಿಂದ ಈ ದೇಶದ ಕಾರ್ಮಿಕರು ಅನುಭವಿಸುತ್ತಿರುವ ಹೃದಯವಿದ್ರಾವಕ ಕತೆಯನ್ನು ಸಾರಿ ಹೇಳುತ್ತಿವೆೆ. ಆದರೆ ಕೇಳುವ ಕಿವಿಗಳು ಮಾತ್ರ ಇಲ್ಲವೇ ಇಲ್ಲ ಎಂಬಂತಾಗಿದೆ. ‘ರೈಲು ಹಳಿಗಳು ಮಲಗುವುದಕ್ಕೆ ಇರುವುದಲ್ಲ’ ಎಂದು ಹೇಳಿ ಸರಕಾರ ತನ್ನ ಹೊಣೆಯಿಂದ ಕಳಚಿಕೊಳ್ಳಬಹುದು. ಆದರೆ, ರೈಲು ಹಳಿಗಳ ಮೇಲೆ ಮಲಗುವಂತಹ ಸ್ಥಿತಿಯನ್ನು ಅವರಿಗೆ ತಂದಿಟ್ಟವರು ಯಾರು ಎನ್ನುವ ಪ್ರಶ್ನೆಗೂ ಅವರು ಉತ್ತರಿಸಬೇಕಾಗುತ್ತದೆ.

ಮಧ್ಯಪ್ರದೇಶದಲ್ಲಿರುವ ತಮ್ಮ ಊರೆಡೆಗೆ ಆ ಕಾರ್ಮಿಕರು ಕಾಲ್ನಡಿಗೆಯಿಂದ ಸಾಗುತ್ತಿದ್ದರು. ಈ ದೇಶದ ರೈಲುಹಳಿಗಳನ್ನು ನಿರ್ಮಿಸಿದವರು, ರೈಲು ಬಂಡಿಗಳನ್ನು ಕಟ್ಟಿದವರು ಅವರು. ಅಭಿವೃದ್ಧಿಯೆಂದು ಯಾವುದನ್ನು ನಾವು ಬಣ್ಣಿಸುತ್ತೇವೆಯೋ ಆ ನಗರವನ್ನು ಕಟ್ಟಿದ ನಿರ್ಮಾತೃಗಳು ಅವರು. ಲಾಕ್‌ಡೌನ್ ಘೋಷಿಸಿದಾಗ ನಮ್ಮ ಸರಕಾರ ‘ಇಂತಹದೊಂದು ವರ್ಗ’ ಈ ದೇಶದಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದನ್ನೇ ಮರೆತು ಬಿಟ್ಟಿತು. ನಡೆಯುವುದಕ್ಕೆ ಕನಿಷ್ಠ ರಸ್ತೆಯೂ ಇಲ್ಲದೆ, ರೈಲು ಹಳಿಗಳನ್ನೇ ದಾರಿ ಮಾಡಿಕೊಂಡು ಅವರು ಸಾಗುತ್ತಿದ್ದರು. ಸರಕಾರ ಘೋಷಿಸಿದ ‘ಲಾಕ್‌ಡೌನ್’ನ್ನು ನಂಬಿ, ಯಾವ ರೈಲೂ ಬರಲಾರವು ಎಂದು ಭಾವಿಸಿ ಅದೇ ರೈಲು ಹಳಿಗಳನ್ನು ಹಾಸಿಗೆ ಮಾಡಿಕೊಂಡು ನಿದ್ದೆ ಹೋದರು. ಯಾವ ರೈಲಿನಲ್ಲಿ ತಮ್ಮ ಮನೆಗಳನ್ನು ಸೇರಬೇಕಾಗಿತ್ತೋ ಅದೇ ರೈಲು ಅವರ ಮೇಲೆಯೇ ಹರಿದು ಹೋಯಿತು. ಮನೆ ತಲುಪುವ ಅವರ ಕನಸು ಶಾಶ್ವತವಾಗಿ ರೈಲು ಹಳಿಯಲ್ಲೇ ಮುಗಿದು ಹೋಯಿತು. ಇದನ್ನು ಒಂದು ದುರಂತ, ಅಪಘಾತ ಎಂದು ಕರೆದು ಸುಮ್ಮನಿರುವುದಕ್ಕೆ ಖಂಡಿತವಾಗಿಯೂ ಸಾಧ್ಯವಿಲ್ಲ. ಗೊತ್ತಿದ್ದೂ ಸರಕಾರದ ನೇತೃತ್ವದಲ್ಲೇ ನಡೆದ ಬರ್ಬರ ಹತ್ಯಾಕಾಂಡವಿದು.

ಈ ಹತ್ಯಾಕಾಂಡವನ್ನು ನಾವು ಇದೇ ಮೊದಲ ಬಾರಿ ನೋಡುತ್ತಿರುವಂತೆ ಬೆಚ್ಚಿ ಬಿದ್ದಿದ್ದೇವೆ. ಆದರೆ ಲಾಕ್‌ಡೌನ್ ಘೋಷಣೆಯಾದ ದಿನಗಳಿಂದ ಇಂತಹ ದುರಂತಗಳು ಬೇರೆ ಬೇರೆ ರೂಪಗಳಲ್ಲಿ ನಡೆಯುತ್ತಲೇ ಬಂದಿವೆ. ಕೆಲವು ಮಾಧ್ಯಮಗಳಲ್ಲಿ ವರದಿಯಾಗಿ ರದ್ದಿ ಸೇರಿದ್ದರೆ, ಹಲವು ಜಗತ್ತಿಗೆ ಗೊತ್ತೇ ಆಗದಂತೆ ಮುಚ್ಚಿ ಹೋಗಿವೆ. ಹಾಗೆ ನೋಡಿದರೆ ಲಾಕ್‌ಡೌನ್ ವಲಸೆ ಕಾರ್ಮಿಕರಿಗೆ ಇದೇ ಮೊದಲ ಅನುಭವ ಅಲ್ಲ. ಈ ಹಿಂದೆ ನೋಟು ನಿಷೇಧವಾದಾಗ ನಗರದ ವಲಸೆ ಕಾರ್ಮಿಕರು ಇಂತಹದೇ ಒಂದು ಬರ್ಬರ ಸ್ಥಿತಿಯನ್ನು ಅನುಭವಿಸಿದ್ದರು. ನೋಟು ನಿಷೇಧವಾದಾಗ ಕೆಲವು ತಿಂಗಳು ನಗರಗಳು ಯಾವುದೇ ಕಟ್ಟಡ ಕಾಮಗಾರಿಗಳಿಲ್ಲದೆ ಸ್ತಬ್ಧವಾಗಿದ್ದವು. ವಲಸೆ ಕಾರ್ಮಿಕರು ನಗರಗಳಲ್ಲಿ ಸಾಧಾರಣವಾಗಿ ಕಟ್ಟ ಡ ಕಾಮಗಾರಿಗಳನ್ನೇ ನೆಚ್ಚಿಕೊಂಡಿರುವುದರಿಂದ, ಅತ್ತ ಹಳ್ಳಿಗಳಿಗೂ ಮರಳಲಾಗದೆ, ಇತ್ತ ನಗರಗಳಲ್ಲೂ ಇರಲಾರದೆ ಅತಂತ್ರರಾಗಿದ್ದರು. ‘ಲಾಕ್‌ಡೌನ್’ ಅಧಿಕೃತವಾಗಿ ಘೋಷಣೆಯಾಗಿಲ್ಲ ಎನ್ನುವುದು ಬಿಟ್ಟರೆ, ಉಳಿದಂತೆ ಕಾರ್ಮಿಕರನ್ನು ನಗರ ದಿಗ್ಬಂಧನದಲ್ಲೇ ಇಟ್ಟಿತ್ತು. ಏಕಾಏಕಿ ನೋಟು ನಿಷೇಧ ಘೋಷಣೆಯಾಗಿರುವುದರಿಂದ ಕೈಯಲ್ಲಿ ಕಾಸಿಲ್ಲದೆ ಬರಿಗೈಯಲ್ಲೇ ಹಳ್ಳಿಗಳಿಗೆ ಮರಳಿ, ಸಿಕ್ಕಿದ ಕೂಲಿಯನ್ನು ಪಡೆದು ಅರೆ ಹೊಟ್ಟೆಯಲ್ಲಿ ಬದುಕಿದ್ದರು. ಆ ಸಂದರ್ಭದಲ್ಲಿ ತಮ್ಮ ತಮ್ಮ ಊರುಗಳಿಗೆ ಮರಳುವ ಅವಕಾಶವಾದರೂ ಕಾರ್ಮಿಕರಿಗೆ ಇತ್ತು. ಆದರೆ ಈ ಬಾರಿ ಮಾತ್ರ ಅವರನ್ನು ನಗರ ಈ ಹಿಂದಿಗಿಂತ ಬರ್ಬರವಾಗಿ ನಡೆಸಿಕೊಂಡಿತು.

ಲಾಕ್‌ಡೌನ್ ಘೋಷಣೆಯಾದ ನಾಲ್ಕನೆಯ ದಿನವೇ ಊರು ಸೇರುವ ತವಕದಲಿ ದಿಲ್ಲಿ ಸೇರಿದಂತೆ ವಿವಿಧ ಶಹರಗಳ ಬಸ್ ನಿಲ್ದಾಣಗಳಲ್ಲಿ ನೆರೆದ ವಲಸೆ ಕಾರ್ಮಿಕರನ್ನು ನೋಡಿದ ಬಳಿಕವಾದರೂ ಸರಕಾರ ಅವರ ಕುರಿತಂತೆ ಒಂದು ಸ್ಪಷ್ಟ ನಿಲುವನ್ನು ತಳೆಯುವ ಅಗತ್ಯವಿತ್ತು. ಆಗಿನ್ನೂ ಕೊರೋನ ಸೋಂಕು ಮೂರನೆಯ ಹಂತಕ್ಕೆ ಕಾಲಿಟ್ಟಿರಲಿಲ್ಲ. ಅದಿನ್ನೂ ಶ್ರೀಮಂತರು, ಮೇಲ್‌ಮಧ್ಯಮ ವರ್ಗದ ನಡುವೆಯೇ ಹರಿದಾಡುತ್ತಿತ್ತು. ‘ಲಾಕ್‌ಡೌನ್ ಎಲ್ಲಿಯವರೆಗೆ?’ ಎನ್ನುವ ಬಗ್ಗೆ ಸ್ಪಷ್ಟ ಅರಿವಿಲ್ಲದ ಸರಕಾರ, ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಮರಳಿಸುವ ಉದ್ದೇಶವನ್ನೇ ಹೊಂದಿರಲಿಲ್ಲ. ಯಾಕೆಂದರೆ ಬಿಲ್ಡರ್ ಮಾಫಿಯಾ ಸರಕಾರದ ಮೇಲೆ ಪರೋಕ್ಷ ಒತ್ತಡವನ್ನು ಹೇರಿತ್ತು. ಸೋಂಕು ಇತರ ಊರಿಗೂ ಹರಡುವ ನೆಪವನ್ನು ಒಡ್ಡಿ ಈ ಕಾರ್ಮಿಕರನ್ನು ಅಲ್ಲಲ್ಲೇ ಇರುವಂತೆ ಸರಕಾರ ಒತ್ತಾಯಿಸಿತು. ಆದರೆ ಒತ್ತಾಯಕ್ಕೆ ಪೂರಕವಾಗಿ ಅವರಿಗೆ ಬೇಕಾದ ನೀರು, ಊಟ, ವಸತಿ, ಆರೈಕೆಗಳನ್ನು ಒದಗಿಸಿದ್ದಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಕೆಲವು ಸರಕಾರೇತರ ಸಂಸ್ಥೆಗಳು ಇವರಿಗೆ ಊಟ ಒದಗಿಸುವ ಪ್ರಯತ್ನ ಮಾಡಿದವಾದರೂ ಅದು ಬಹಳ ದಿನ ನಡೆಯಲಿಲ್ಲ.

ಊರಿಗೆ ಮರಳಲೇ ಬೇಕಾದ ಸ್ಥಿತಿ ವಲಸೆ ಕಾರ್ಮಿಕರಿಗೆ ಎದುರಾಯಿತು. ವಿಪರ್ಯಾಸವೆಂದರೆ, ಹೀಗೆ ವಲಸೆ ಹೊರಟ ಕಾರ್ಮಿಕರಲ್ಲಿ ಶೇ. 78 ಮಂದಿಗೆ ದುಡಿದ ವೇತನವೇ ಕೈಗೆ ಬಂದಿರಲಿಲ್ಲ. ಅಲ್ಲಿಂದ ನಿಧಾನಕ್ಕೆ ವಲಸೆ ಕಾರ್ಮಿಕರ ಮಾರಣ ಹೋಮಗಳು ಆರಂಭವಾದವು. ನೂರಾರು ಕಿ.ಮೀ. ನಡೆದು ಇನ್ನೇನು ಮನೆ ಸೇರಬೇಕು ಎನ್ನುವಷ್ಟರಲ್ಲಿ ಅಸ್ವಸ್ಥಳಾಗಿ ಪ್ರಾಣ ಕಳೆದುಕೊಂಡ ಎಳೆ ಬಾಲಕಿಯ ದುರಂತ ಮಾಧ್ಯಮಗಳ ಮುಖಪುಟದಲ್ಲಿ ಪ್ರಕಟವಾಯಿತು. ಇದೇ ಸಂದರ್ಭದಲ್ಲಿ ಇಂತಹದೇ ಘಟನೆಗಳು ದೇಶಾದ್ಯಂತ ವರದಿಯಾಗತೊಡಗಿದವು. ರೈಲ್ವೆ ಹಳಿಗಳ ಮೇಲೆ ಪ್ರಾಣ ಕಳೆದುಕೊಂಡ ಅಷ್ಟೂ ಜನರ ದುರಂತಕ್ಕೂ, ಪ್ರಯಾಣದ ಸಂದರ್ಭದಲ್ಲಿ ಅರ್ಧದಾರಿಯಲ್ಲೇ ಮೃತಪಟ್ಟ ಕಾರ್ಮಿಕರ ದುರಂತಕ್ಕೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ರೈಲ್ವೆ ಹಳಿಗಳಲ್ಲಿ ನಡೆದ ಸಾವು ಒಂದು ಕ್ಷಣದಲ್ಲಿ ನಡೆದು ಹೋಯಿತು. ಆದರೆ ಊರು ತಲುಪಿಯೇ ತಲುಪುತ್ತೇನೆ ಎಂದು ಕಾಲ್ನಡಿಗೆಯಲ್ಲಿ ನಡೆಯುತ್ತಾ ನರಕ ಅನುಭವಿಸಿದವರ ಸಾವು ಅದಕ್ಕಿಂತಲೂ ಭೀಕರವಾಗಿದ್ದವು.

ಇತ್ತೀಚೆಗೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಆಧರಿಸಿ, ಸಾಮಾಜಿಕ ಹೋರಾಟಗಾರರು ಮತ್ತು ವಿದ್ವಾಂಸರು ಒಂದು ವರದಿಯನ್ನು ತಯಾರಿಸಿದ್ದರು. ಈ ವರದಿಯ ಪ್ರಕಾರ ಲಾಕ್‌ಡೌನ್‌ನ ತೆರೆ ಮರೆಯಲ್ಲಿ ನೂರಾರು ಕಾರ್ಮಿಕರು ಮೃತಪಟ್ಟಿದ್ದಾರೆ. ಹಸಿವಿನಿಂದ ನಲ್ವತ್ತಕ್ಕೂ ಅಧಿಕ ಕಾರ್ಮಿಕರು ಮೃತಪಟ್ಟಿದ್ದರೆ, 75ಕ್ಕೂ ಅಧಿಕ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಮಾರು 40 ಮಂದಿ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರು ತಲುಪುವ ಧಾವಂತದಿಂದ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಆದರೆ ಈ ಸಾವುಗಳ ಕುರಿತಂತೆ ಸರಕಾರವಾಗಲಿ, ಮಾಧ್ಯಮಗಳಾಗಲಿ ಗಂಭೀರವಾಗಿ ಚರ್ಚಿಸಲೇ ಇಲ್ಲ. ಸುಮಾರು ಒಂದೂವರೆ ತಿಂಗಳ ಕಾಲ ವಲಸೆ ಕಾರ್ಮಿಕರನ್ನು ತಡೆ ಹಿಡಿದು, ಅವರನ್ನು ಸಂಪೂರ್ಣ ನಿಶ್ಶಕ್ತರನ್ನಾಗಿಸಿದ ಬಳಿಕ ಸರಕಾರ ಅಂತಿಮವಾಗಿ ಊರಿಗೆ ಹೋಗಲು ಅನುಮತಿ ನೀಡಿತು. ಇದೀಗ ಅವರನ್ನು ಊರಿಗೆ ತಲುಪಿಸುವ ಬಗೆ ಹೇಗೆ ? ಅವರ ಪ್ರಯಾಣದ ದರವನ್ನು ಭರಿಸುವವರು ಯಾರು ಎನ್ನುವುದು ತಿಕ್ಕಾಟಕ್ಕೆ ಕಾರಣವಾಯಿತು.

ರಾಜ್ಯ ಮತ್ತು ಕೇಂದ್ರದ ನಡುವಿನ ಸಂಘರ್ಷದಲ್ಲಿ ಕಾರ್ಮಿಕರು ಇನ್ನಷ್ಟು ಬಡವಾದರು. ಅದಾಗಲೇ ಹಂತಹಂತವಾಗಿ ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆಯಾದ ಕಾರಣದಿಂದ ಬಿಲ್ಡರ್‌ಗಳು ಎಚ್ಚರಗೊಂಡರು. ಕಾರ್ಮಿಕರು ಊರಿಗೆ ಹೊರಟರೆ ಕಾಮಗಾರಿ ನನೆಗುದಿಯಲ್ಲಿ ಬೀಳಬಹುದು ಎಂಬ ಆತಂಕದಿಂದ, ವಿವಿಧ ರಾಜ್ಯ ಸರಕಾರಗಳಿಗೆ ಕಾರ್ಮಿಕರನ್ನು ಕಳುಹಿಸದಂತೆ ಒತ್ತಡ ಹೇರತೊಡಗಿದರು. ಇವೆಲ್ಲದರ ಪರಿಣಾಮವಾಗಿ ರೈಲ್ವೆ ಹಳಿಗಳಲ್ಲಿ 16 ಹೆಣಗಳು ಬಿದ್ದಿವೆ. ಆದರೆ, ದೇಶಾದ್ಯಂತ ನಡೆದ ಕಾರ್ಮಿಕರ ಸಾವುಗಳನ್ನೂ ಇದರ ಜೊತೆಗೆ ಸೇರಿಸಿದರೆ, ನಡೆದಿರುವುದು ಅಪಘಾತವಲ್ಲ, ಹತ್ಯಾಕಾಂಡ ಎನ್ನುವ ಸತ್ಯ ಹೊಳೆದು ಬಿಡುತ್ತದೆ. ಈ ಹತ್ಯಾಕಾಂಡವನ್ನು ಕೊರೋನ ವೈರಸ್‌ನ ತಲೆಗೆ ಕಟ್ಟದೆ, ಅದಕ್ಕೆ ಕಾರಣರಾದ ನಿಜವಾದ ಆರೋಪಿಗಳನ್ನು ಗುರುತಿಸಿ ಶಿಕ್ಷಿಸುವ ಕೆಲಸ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News