ಅವಶ್ಯಕತೆ ಬಂದರೆ ಜೋಳಿಗೆ ಹಿಡಿಯಿರಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ರಮೇಶ್ ಬಾಬು ಸಲಹೆ

Update: 2020-05-09 11:17 GMT

ಬೆಂಗಳೂರು, ಮೇ 9: ರಾಜ್ಯ ಸರಕಾರದ ಅನುದಾನ ಕಡಿತದ ನೆಪದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿವಿಧ ಪ್ರಶಸ್ತಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಕಡಿತಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮೇಲ್ಮನೆ ಮಾಜಿ ಸದಸ್ಯ ರಮೇಶ್ ಬಾಬು, 'ಕನ್ನಡ ಕಟ್ಟುವ ಕೆಲಸ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆಗಬೇಕು. ಹಣದ ಕಾರಣ ನೀಡಿ ಅಧ್ಯಕ್ಷರು ವಿವಿಧ ಪ್ರಶಸ್ತಿ, ವಿದ್ಯಾರ್ಥಿ ವೇತನ ಸ್ಥಗಿತ ಎಂದಿದ್ದಾರೆ. ಪಲಾಯನವೇ ಇಲ್ಲ ಆತ್ಮ ವಂಚನೆಯೇ?' ಎಂದು ಪ್ರಶ್ನಿಸಿದ್ದಾರೆ.

ಶನಿವಾರ ಟ್ವೀಟ್ ಮಾಡಿರುವ ಅವರು, ಸರಕಾರ ಸಾಂಕೇತಿಕ. ನಿಮ್ಮ ಸಂಬಳ, ಸಾರಿಗೆ, ಸಿಬ್ಬಂದಿ ಸವಲತ್ತು ಕಡಿತ ಮಾಡಿಕೊಳ್ಳಿ, ಅವಶ್ಯಕತೆ ಬಂದರೆ ಜೋಳಿಗೆ ಹಿಡಿಯಿರಿ. ಪ್ರಾಧಿಕಾರ, ನೀವು ಬೆಳಗಲಿ' ಎಂದು ಯಾವುದೇ ಕಾರಣಕ್ಕೂ ವಿವಿಧ ಪ್ರಶಸ್ತಿಗಳು ಹಾಗೂ ವಿದ್ಯಾರ್ಥಿ ವೇತನ ಕಡಿತ ಮಾಡಬೇಡಿ ಎಂದು ಆಗ್ರಹಿಸಿದ್ದಾರೆ.

ಕೊಲೆ, ಅಪರಾಧದ ಮಾಹಿತಿ ನೀಡಲಿ: ಸ್ವಾತಂತ್ರ್ಯ ಬಂದು 20 ವರ್ಷಗಳ ನಂತರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದೆ. ಅಂದರೆ ಇದು ಅನಿವಾರ್ಯವಲ್ಲ. ಮುಖ್ಯಮಂತ್ರಿಗಳೇ ದಂಧೆ ಹಿಂದಿನ ದಂಧೆ ಏನು? ಪ್ರತಿದಿನ ನಿಮ್ಮ ಬಾವಚಿತ್ರದೊಂದಿಗೆ ಕೋವಿಡ್ ಮಾಹಿತಿ ನೀಡುವ ಸರಕಾರ ಜೊತೆಯಲ್ಲಿ ಮದ್ಯದಿಂದ ಆಗುತ್ತಿರುವ ಸಾವು, ಕೊಲೆ, ಅಪರಾಧ ಮಾಹಿತಿ ನೀಡಲಿ' ಎಂದು ರಮೇಶ್ ಬಾಬು ಮತ್ತೊಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News