ಭಟ್ಕಳ: ಲಾಕ್ಡೌನ್ ನಿಂದ ಸಂಕಷ್ಟದಲ್ಲಿ ಸಿಲುಕಿರುವ ಪ.ಬಂಗಾಳದ ನೂರಕ್ಕೂ ಹೆಚ್ಚು ಮೀನುಗಾರರು
ಕಾರವಾರ, ಮೇ.9: ಕೋವಿಡ್ -19 ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಲಾಕ್ ಡೌನ್ ಘೋಷಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಿಂದ ಭಟ್ಕಳಕ್ಕೆ ದುಡಿಯಲು ಬಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆಯಲ್ಲಿರುವ ಮೀನುಗಾರಿಕೆ ಬಂದರಿನಲ್ಲಿ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸುಮಾರು ನೂರಕ್ಕೂ ಹೆಚ್ಚು ಮೀನುಗಾರರು ಪರ್ಶಿನ್ ಮತ್ತು ಫಿಶಿಂಗ್ ಬೋಟ್‍ಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಲಾಕ್ ಡೌನ್‍ನಿಂದಾಗಿ ಕಳೆದ 46 ದಿನಗಳಿಂದ ಭಟ್ಕಳದಲ್ಲಿ ಮೀನುಗಾರಿಕೆ ಸ್ಥಗಿತಗೊಂಡಿದೆ. ಹೀಗಾಗಿ ಕಾರ್ಮಿಕರು ಅತ್ತ ಊರಿಗೂ ಹೋಗಲಾರದೆ ಇತ್ತ ಮನೆಗೂ ಮರಳಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. 2,500 ಕಿಲೋ ಮೀಟರ್ ದೂರದಲ್ಲಿ ಮನೆಮಂದಿ ದುಡಿಯುತ್ತಿರುವುದರಿಂದ ಅತ್ತ ಕಾರ್ಮಿಕರ ಕುಟುಂಬದವರೂ ಚಿಂತೆಗೀಡಾಗಿದ್ದಾರೆ.
ಕಾರ್ಮಿಕರ ನಿತ್ಯದ ಊಟೋಪಚಾರಕ್ಕಾಗಿ ಬೋಟ್‍ಗಳ ಮಾಲಕರು, ಸ್ಥಳೀಯರು ದಿನಸಿ ವಸ್ತುಗಳನ್ನು ನೀಡಿದ್ದಾರೆ. ಆದರೆ, ಹಣಕಾಸಿನ ಸ್ಥಿತಿ ಅವರನ್ನು ಬಾಧಿಸುತ್ತಿದೆ. ನಿತ್ಯ ಖರ್ಚಿಗೆ ಅವರು ಪರದಾಡುವಂತಾಗಿದೆ. ಮನೆಯ ಚಿಂತೆಯಲ್ಲಿ ಕಾರ್ಮಿಕರು ದಿನ ದೂಡುತ್ತಿದ್ದಾರೆ. ಹೇಗಾದರೂ ಮಾಡಿ ನಮ್ಮನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಬೋಟ್‍ಗಳ ಮಾಲಕರಲ್ಲಿ ಕಾರ್ಮಿಕರು ಮನವಿ ಮಾಡುತ್ತಿದ್ದಾರೆ.
ನಾವು ಪಶ್ಚಿಮ ಬಂಗಾಳದಿಂದ ಇಲ್ಲಿ ದುಡಿಯಲು ಬಂದಿದ್ದೇವೆ. ಲಾಕ್ ಡೌನ್ ನಿಂದಾಗಿ ನಾವು ಊರಿಗೆ ಹೋಗಲಾರದೆ ತೊಂದರೆಗೆ ಸಿಲುಕಿದ್ದೇವೆ. ಹೇಗಾದರೂ ಮಾಡಿ ನಮ್ಮನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿ ಎಂದು ಕಾರ್ಮಿಕ ಚಿತ್ತರಂಜನ್ ಅಂಗಲಾಚಿಕೊಂಡರು.
ಬೇರೆ ರಾಜ್ಯ, ಜಿಲ್ಲೆಯಿಂದ ನಾವು ದುಡಿಯಲು ಇಲ್ಲಿಗೆ ಬಂದಿದ್ದೇವೆ. ಲಾಕ್ ಡೌನ್‍ನಿಂದಾಗಿ ನಾವು ತೊಂದರೆಗೆ ಸಿಲುಕಿದ್ದೇವೆ. ನಮ್ಮನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿ ಎಂದು ಕಾರ್ಮಿಕ ಅಜಯ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದರು.
"ಕೊರೋನ ಕಾರಣದಿಂದಾಗಿ ಮೀನುಗಾರಿಕೆ ಹಂಗಾಮು ಬಹುತೇಕ ಮುಗಿದಂತಾಗಿದೆ. ಲಾಕ್ ಡೌನ್ ಕಾರಣ ಪಶ್ಚಿಮ ಬಂಗಾಳದ ಕಾರ್ಮಿಕರು ತೊಂದರೆಗೆ ಸಿಲುಕಿದ್ದು ಅವರನ್ನು ಊರಿಗೆ ಮರಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಶೀಘ್ರ ಕ್ರಮಕೈಗೊಂಡು ಕಾರ್ಮಿಕರು ಊರಿಗೆ ಮರಳಲು ನೆರವಾಗಬೇಕು" ಎಂದು ಮೀನುಗಾರರ ಯುವ ಮುಖಂಡ ಮಹೇಶ್ ಖಾರ್ವಿ ಮನವಿ ಮಾಡಿದರು.