ರಾಜ್ಯದಲ್ಲಿ ಸತತ ಎರಡನೇ ದಿನ 40ಕ್ಕೂ ಅಧಿಕ ಮಂದಿಗೆ ಕೊರೋನ ವೈರಸ್ ಧೃಢ
ಬೆಂಗಳೂರು, ಮೇ 9: ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ ಗಣನೀಯ ಪ್ರಮಾಣದಲ್ಲಿ ಕೊರೋನ ವೈರಸ್ ಸೋಂಕು ಏರಿಕೆಯಾಗುತ್ತಿದ್ದು, ಸತತ ಎರಡನೇ ದಿನ 40ಕ್ಕೂ ಅಧಿಕ ಮಂದಿಗೆ ಪಾಸಿಟಿವ್ ಬಂದಿದೆ. ಇಂದು ಒಟ್ಟು 41 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ಕಂಡುಬಂದಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಶುಕ್ರವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆಯ ಅವಧಿಯಲ್ಲಿ 41 ಸೋಂಕು ಪ್ರಕರಣ ಪತ್ತೆಯಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಲೆಟಿನ್ ತಿಳಿಸಿದೆ.
ಬೆಂಗಳೂರು ನಗರದಲ್ಲಿ 12, ಭಟ್ಕಳದಲ್ಲಿ 8, ದಾವಣಗೆರೆಯಲ್ಲಿ 6, ತುಮಕೂರಿನಲ್ಲಿ 4, ಬಂಟ್ವಾಳ, ಚಿತ್ರದುರ್ಗ ಹಾಗೂ ಬೀದರ್‌ನಲ್ಲಿ ತಲಾ 3, ವಿಜಯಪುರ, ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ಈ ಪೈಕಿ ಭಟ್ಕಳದ 1.5 ವರ್ಷದ ಗಂಡು ಮಗು, 2 ವರ್ಷ 6 ತಿಂಗಳ ಹೆಣ್ಣು ಮಗುವಿಗೆ ಸೋಂಕು ದೃಢಪಟ್ಟಿವೆ. ಅಲ್ಲದೇ, ಬೀದರ್ ನಲ್ಲಿ 12 ವರ್ಷದ ಬಾಲಕಿ, ವಿಜಯಪುರದ 11 ವರ್ಷದ ಬಾಲಕಿಯಲ್ಲಿ ಕೊರೋನ ಪಾಸಿಟಿವ್ ಬಂದಿದೆ.
ರಾಜ್ಯದ ಒಟ್ಟು 794 ಸೋಂಕಿತರ ಪೈಕಿ 386 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 30 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.