ಕಷ್ಟಕಾಲದಲ್ಲಿ ವಲಸೆ ಕಾರ್ಮಿಕರನ್ನು ಬೀದಿಗೆ ತಳ್ಳಿದ ಬಿಎಸ್‍ವೈ ನಡೆ ಅಮಾನವೀಯ: ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಮೇ 9: ಬೇರೆ ರಾಜ್ಯಗಳಲ್ಲಿ ಸಾವಿರಾರು ಕನ್ನಡಿಗರು ರಾಜ್ಯಕ್ಕೆ ಬರಲು ಕಾಯುತ್ತಿದ್ದಾರೆ. ಅವರಿಗೆ ಬರಲು ಪ್ರಯಾಣಕ್ಕೆ ವ್ಯವಸ್ಥೆ ಮಾಡುವ ಜೊತೆಯಲ್ಲಿ ಈಗಾಗಲೇ ಬಂದು ಗಡಿಗಳಲ್ಲಿ ಕಾಯುತ್ತಿರುವವರನ್ನು ಸತಾಯಿಸದೆ ಒಳಗೆ ಬರಮಾಡಿಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅನ್ಯ ರಾಜ್ಯಗಳಲ್ಲಿರುವ ಸುಮಾರು 56ಸಾವಿರ ಕನ್ನಡಿಗರು ರಾಜ್ಯಕ್ಕೆ ಬರಲು ಪಾಸ್‍ಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಸೇರಿ ಇನ್ನಿತರ ಕಡೆಗಳಲ್ಲಿ ಅಸಂಖ್ಯಾತ ಕನ್ನಡಿಗರು ಸಿಲುಕಿದ್ದಾರೆ. ರಾಜ್ಯದ ಮರ್ಯಾದೆ ಮತ್ತು ಜನರ ಆರೋಗ್ಯವನ್ನು ಅತ್ಯಂತ ಕಾಳಜಿಯಿಂದ ಸಂರಕ್ಷಿಸಬೇಕಾದುದು ಸರಕಾರದ ಕರ್ತವ್ಯ ಎಂದು ಸಲಹೆ ಮಾಡಿದ್ದಾರೆ.
ರೈಲು ವ್ಯವಸ್ಥೆ ಕಲ್ಪಿಸಿ: ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಅವಶ್ಯ ಇರುವಷ್ಟು ರೈಲುಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಬೇಕು. ಅವರಿರುವ ಜಾಗದಿಂದ ರೈಲ್ವೆ ನಿಲ್ದಾಣದ ವರೆಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಬೇಕು. ಬೀದಿಯಲ್ಲಿರುವ ವಲಸೆ ಕಾರ್ಮಿಕರನ್ನು ಕೊರೋನ ಪರೀಕ್ಷೆಗೆ ಒಳಪಡಿಸಿ ರೋಗ ಲಕ್ಷಣಗಳಿದ್ದರೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣ ತಪ್ಪು ತಿದ್ದಿಕೊಂಡು ಬೀದಿಯಲ್ಲಿರುವ ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೆ ಊಟ-ವಸತಿ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬೆಂಗಳೂರು ನಗರವೂ ಸೇರಿದಂತೆ ನಮ್ಮ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗೆ ಬೆವರಧಾರೆ ಎರೆದ ವಲಸೆ ಕಾರ್ಮಿಕರನ್ನು ಕಷ್ಟಕಾಲದಲ್ಲಿ ಕೈಬಿಟ್ಟು ಬೀದಿಗೆ ತಳ್ಳಿರುವ ಮುಖ್ಯಮಂತ್ರಿ ಬಿಎಸ್‍ವೈ ಅವರ ನಡೆ ಅಮಾನವೀಯವಾದುದು.
-ಸಿದ್ದರಾಮಯ್ಯ, ವಿಪಕ್ಷ ನಾಯಕ