ಕಾರ್ಮಿಕರಿಗೆ ಸುರಕ್ಷೆ ಒದಗಿಸದ ಆರೋಪ: ಕೊಪ್ಪಳದ ಮೂರು ಕಾರ್ಖಾನೆಗಳ ವಿರುದ್ಧ ದೂರು ದಾಖಲು

Update: 2020-05-09 13:00 GMT
ಸಾಂದರ್ಭಿಕ ಚಿತ್ರ

ಕೊಪ್ಪಳ, ಮೇ 9: ಕಟ್ಟುನಿಟ್ಟಿನ ಲಾಕ್‍ಡೌನ್ ಸೂಚನೆ ನಡುವೆ ಕಾರ್ಮಿಕರಿಗೆ ಸುರಕ್ಷೆ ಒದಗಿಸದ ಕೊಪ್ಪಳ ಜಿಲ್ಲೆಯ ಮೂರು ಕಾರ್ಖಾನೆಗಳ ವಿರುದ್ಧ ಮುನಿರಾಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಡಳಿತ ಮಂಡಳಿ, ಕಾರ್ಮಿಕ ವಿಭಾಗದ ಅಧಿಕಾರಿ ಹಾಗೂ ಕಾರ್ಮಿಕ ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಲಾಗಿದೆ.

ಹೊಸಕನಕಾಪುರದಲ್ಲಿ ಆರಂಭವಾಗಿರುವ ಮುಕುಂದ್ ಸುಮಿ, ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿಸ್ ಮತ್ತು ಕಲ್ಯಾಣಿ ಕಾರ್ಖಾನೆ ವಿರುದ್ಧ ಕಾರ್ಮಿಕ ಇಲಾಖೆ ಅಧಿಕಾರಿ ವೀಣಾ ಮಾಸ್ತಿ ದೂರು ನೀಡಿದ್ದರು. ಕಳೆದ ಎರಡು ದಿನಗಳಿಂದ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳುತ್ತಿರುವ ಬಗ್ಗೆ ಅವರು ಮಾಹಿತಿ ಪಡೆದಿದ್ದರು.

ಕಾಲ್ನಡಿಗೆ ಮೂಲಕ ತಮ್ಮ ರಾಜ್ಯಗಳಿಗೆ ತೆರಳಲು ರಸ್ತೆಯ ಮೂಲಕ ಸಾಗುತ್ತಿದ್ದರು. ಗಿಣಗೇರಿ ಬಳಿ ರಾತ್ರಿ ವಲಸೆ ಹೋಗುತ್ತಿದ್ದ ಕಾರ್ಮಿಕರನ್ನು ತಡೆದ ಅಧಿಕಾರಿಗಳು ಅವರ ಬಳಿ ಸಮಗ್ರ ಮಾಹಿತಿ ಪಡೆದುಕೊಂಡು ಸಂಬಂಧಿಸಿದ ಕಾರ್ಖಾನೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸರಕಾರದ ಹೊಸ ಅಧಿಸೂಚನೆ ಪ್ರಕಾರ ಕಾರ್ಮಿಕರಿಗೆ ವೇತನ, ಮೂಲಸೌಕರ್ಯ ಕಲ್ಪಿಸದ ಕಾರ್ಖಾನೆಗಳ ವಿರುದ್ಧ ಐಪಿಸಿ ಕಲಂ 107/2020, ಕಲಂ 188, 269, 270 ಇವುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಲಾಕ್‍ಡೌನ್ ಆದಾಗ ಜಿಲ್ಲೆಯ ಬೃಹತ್ ಕಾರ್ಖಾನೆಗಳ ಆಡಳಿತ ಮಂಡಳಿಯು ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ, ನಮಗೆ ಸರಿಯಾಗಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಕಾರ್ಮಿಕರು ತಮ್ಮ ಊರಿಗೆ ತೆರಳಲು ನಿರ್ಧರಿಸಿದ್ದರು. ಈ ಹಿನ್ನೆಲೆ ಪೊಲೀಸರು ಅವರನ್ನು ತಡೆದು ಯಾವುದೇ, ರೈಲು, ಬಸ್‍ಗಳ ವ್ಯವಸ್ಥೆಯಿಲ್ಲ. ನೀವು ಉಳಿದುಕೊಳ್ಳಿ ನಿಮಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಜಿಲ್ಲಾಡಳಿತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News