×
Ad

ಕೊರೋನ ಸೋಂಕಿನಿಂದ ಆಗುವ ಸಾವಿನ ಸಂಖ್ಯೆ ಕಡಿಮೆ ಮಾಡಲು ಆದ್ಯತೆ: ಟಿ.ಎಂ.ವಿಜಯ ಭಾಸ್ಕರ್

Update: 2020-05-09 22:55 IST

ಬೆಂಗಳೂರು, ಮೇ 9: ಕೊರೋನ ವೈರಸ್ ಸೋಂಕಿನ ವಿರುದ್ಧದ ಹೋರಾಟವನ್ನು ಮುಂದಿನ ಹಂತಕ್ಕೆ ಒಯ್ಯುತ್ತಿದ್ದು, ಗಂಭೀರ ರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆ ನೀಡುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಜತೆಗೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಸಾವಿನ ಸಂಖ್ಯೆ ಕಡಿಮೆ ಮಾಡುವ ಕ್ರಮಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸಲಹೆ ಮಾಡಿದ್ದಾರೆ.

ಇತ್ತೀಚೆಗೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಮೇಲ್ಕಂಡ ಕ್ರಮದಿಂದ ರಾಜ್ಯದಲ್ಲಿ ಕೋವಿಡ್-19 ರೋಗಿಗಳ ಸಾವಿನ ದರವನ್ನು ಕಡಿಮೆ ಮಾಡಲು ನೆರವಾಗಲಿದೆ. ದೈನಂದಿನ ಆಧಾರದ ಮೇಲೆ ತೀವ್ರ ಉಸಿರಾಟದ ಅಸ್ವಸ್ಥತೆಗಳು(ಎಸ್‍ಎಆರ್‍ಐ) ಇರುವ ರೋಗಿಗಳು ಮತ್ತು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಹಾಗೂ ಐಸಿಯುನಲ್ಲಿರುವ ರೋಗಿಗಳ ವಿವರಗಳನ್ನು ದಾಖಲಿಸಿ ಗಮನಹರಿಸಲು ನೋಡಲ್ ಮತ್ತು ಉಪ ನೋಡಲ್ ಅಧಿಕಾರಿಗಳ ನಾಮನಿರ್ದೇಶನ ಮಾಡಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನಾವು ಸೂಚನೆಯನ್ನು ನೀಡಿದ್ದೇವೆ ಎಂದರು.

ಪ್ರಸ್ತುತ ಚಿಕಿತ್ಸಾ ಶಿಷ್ಟಾಚಾರಗಳ ಮೇಲೆ ನಿಯೋಜಿತ ಆಸ್ಪತ್ರೆಗಳಲ್ಲಿ ಕೋವಿಡ್-19ರ ತಂಡಗಳಿಗೆ ತರಬೇತಿ ನಡೆಸಲು ಗಂಭೀರ ಆರೈಕೆ ಬೆಂಬಲ ತಂಡಕ್ಕೆ ಅಗತ್ಯ ಸಿದ್ಧತೆಗಳನ್ನು ನಾವು ಮಾಡಿರುತ್ತೇವೆ. ಉತ್ತಮವಾದ ರೋಗಿಯ ಆರೈಕೆಗಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆಯ ಬೆಂಬಲದ ತಂಡದ ಜೊತೆಗೆ ತಮ್ಮ ಸಂವಾದಗಳನ್ನು ಸರಳಗೊಳಿಸಿಕೊಳ್ಳಲು ಜಿಲ್ಲಾ ಸಮಿತಿಗಳನ್ನು ನಾವು ರಚಿಸಿದ್ದೇವೆ ಎಂದು ವಿಜಯ್ ಭಾಸ್ಕರ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಮಾತನಾಡಿ, ಎಲ್ಲ ರೋಗಿಗಳಿಗೆ ಪಲ್ಸ್ ಆಕ್ಸಿಮೀಟರ್‍ಗಳ ಬಳಕೆಯನ್ನು ಪರಿಣತರ ವೈದ್ಯರ ತಂಡ ಶಿಫಾರಸ್ಸು ಮಾಡಿದೆ. ಎಲ್ಲ ರೋಗಿಗಳು ಸಿಸಿಎಸ್‍ಟಿ ಮೂಲಕ ಅಗತ್ಯವಾಗಿ ಸಾಗುವಂತೆ ಮಾಡಲಾಗಿದೆ. ಶ್ವಾಸಕೋಶಗಳ ಸಮಸ್ಯೆ ಇರುವ ಜನರಿಗೆ ಕೋವಿಡ್-19 ಪರೀಕ್ಷೆ ನಡೆಸಬೇಕು ಎಂದೂ ನಾವು ಸಲಹೆ ನೀಡಿದ್ದೇವೆ.

ಸರಕಾರಿ ಆಸ್ಪತ್ರೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಕ್ಕಾಗಿ ಖಾಸಗಿ ಆಸ್ಪತ್ರೆಗಳಿಂದಲೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ರೋಗಿಯ ನಿರ್ವಹಣೆ ಕುರಿತು ಚರ್ಚೆ ನಡೆಸಲು ಜಿಲ್ಲೆಗಳಲ್ಲಿನ ಪರಿಣತರ ತಂಡದ ಜೊತೆಗೆ ತರಬೇತಿ ಅಧಿವೇಶನ ಸಿಸಿಎಸ್‍ಟಿ ಪರಿಣತರ ಸಮಿತಿ ನಡೆಸಲಿದೆ. ರೋಗಿಗಳಿಗಾಗಿ ಎರಡು ಅಥವಾ ಮೂರು ಹೈ ಫ್ಲೋ ನೇಸಲ್ ಕಾನೂಲಾ ಸಿಸ್ಟಮ್ಸ್ ಗಳನ್ನು ಪಡೆದುಕೊಳ್ಳಲು ಜಿಲ್ಲೆಗಳಿಗೆ ನಾವು ಸಲಹೆ ಮಾಡಿದ್ದೇವೆ ಮತ್ತು ರೋಗಿಗಳಿಗೆ ಹಸ್ತಕ್ಷೇಪರಹಿತ ನಾನ್ ಇನ್‍ವೇಸಿವ್ ವೆಂಟಿಲೇಷನ್‍ನ ಸಲಹೆ ನೀಡಲಾಗಿದೆ ಎಂದರು.

ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಲಾಕ್‍ಡೌನ್ ತೆಗೆದುಹಾಕಿದ ನಂತರ ಕ್ಷಿಪ್ರಗತಿಯಲ್ಲಿ ಹೆಚ್ಚಿದ ಪ್ರಕರಣಗಳನ್ನು ನಿಭಾಯಿಸಲು ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ನಾವು ಯೋಚಿಸುತ್ತಿದ್ದೇವೆ. ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಪರೀಕ್ಷೆ ಮತ್ತು ಚಿಕಿತ್ಸಾ ಪಟ್ಟಿಯನ್ನು ವೈದ್ಯರಿಗೆ ನಾವು ಪೂರೈಸಲಿದ್ದೇವೆ ಎಂದರು.

ಕೋವಿಡ್-19ರಿಂದ ರೋಗಿಗಳು ಮೃತಪಟ್ಟ ನಂತರ ಶ್ವಾಸಕೋಶದ ಅಂಗಾಂಶ ಪರೀಕ್ಷೆಗಳನ್ನು ನಡೆಸಲು ಮತ್ತು ವೈದ್ಯಕೀಯ ಶವ ಪರೀಕ್ಷೆಗಳನ್ನು ನಡೆಸಲು ಪರವಾನಗಿ ಪಡೆಯುವುದಕ್ಕಾಗಿ ಐಸಿಎಂಆರ್‍ಗೆ ನಾವು ಅರ್ಜಿಯನ್ನು ಸಲ್ಲಿಸಲಿದ್ದೇವೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಹೆಚ್ಚಿನ ಪರಿಣಾಮಕಾರಿ ಆರೈಕೆಯನ್ನು ಪೂರೈಸಲು ಇದು ನೆರವಾಗುವುದಲ್ಲದೆ, ಸಾವಿನ ಸಂಖ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ' ಎಂದು ಪಾಂಡೆ ಹೇಳಿದರು.

ಸಭೆಯಲ್ಲಿ ಸಿಸಿಎಸ್‍ಟಿಯ ವಿಶೇಷ ಅಧಿಕಾರಿ ಮತ್ತು ಮುಖ್ಯಸ್ಥರು ಡಾ.ತ್ರಿಲೋಕ್ ಚಂದ್ರ, ಸಮಿತಿ ಸದಸ್ಯ ಸಾರ್ವಜನಿಕ ಆರೋಗ್ಯ ಪರಿಣತ ಡಾ.ಎಂ.ಕೆ.ಸುದರ್ಶನ್, ರಾಜೀವ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ, ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News