×
Ad

ರೇಷ್ಮೆ ರೀಲರ್ಸ್‍ಗಳಿಗೆ ಸಾಲಮಿತಿ ಏರಿಕೆ, ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ: ಸಚಿವ ನಾರಾಯಣಗೌಡ

Update: 2020-05-09 23:40 IST

ಬೆಂಗಳೂರು, ಮೇ 9: ಕೊರೋನ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ನೂಲು ಬಿಚ್ಚಣಿಕೆದಾರರ ನೆರವಿಗೆ ಧಾವಿಸಿರುವ ರಾಜ್ಯ ಸರಕಾರ, ರೀಲರ್ಸ್‍ಗಳಿಗೆ ನೀಡುತ್ತಿದ್ದ ಸಾಲಮಿತಿಯನ್ನು 1 ಲಕ್ಷ ರೂ.ನಿಂದ 2 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗುವುದು. ಜೊತೆಗೆ ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ನೀಡಲಾಗುವುದು ಎಂದು ರೇಷ್ಮೆ ಸಚಿವ ನಾರಾಯಣಗೌಡ ಭರವಸೆ ನೀಡಿದ್ದಾರೆ.

ಶನಿವಾರ ಇಲ್ಲಿನ ಬಹುಮಹಡಿ ಕಟ್ಟಡದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳು ಮತ್ತು ರೇಷ್ಮೆ ರೀಲರ್ಸ್ ಮತ್ತು ಟ್ರೇಡರ್ಸ್‍ಗಳ ಸಭೆಯಲ್ಲಿ ಮಾತನಾಡಿದ ಅವರು, ರೇಷ್ಮೆ ರೀಲರ್ಸ್‍ಗಳ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಬದ್ಧ. ರೇಷ್ಮೆ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ನಿಗದಿ ಮಾಡುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು.

ಹೊರ ರಾಜ್ಯಗಳಲ್ಲಿ ರೇಷ್ಮೆ ವಹಿವಾಟು ನಡೆಸಲು ಕಷ್ಟವಾಗುತ್ತಿದ್ದು, ಈ ಬಗ್ಗೆಯೂ ಸರಕಾರ ಹೊರ ರಾಜ್ಯಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಲಿದೆ. ಅಲ್ಲದೆ, ಲಾಕ್‍ಡೌನ್ ಅವಧಿ ಮುಗಿದ ಕೂಡಲೇ ಚೀನಾ, ವಿಯೆಟ್ನಾಂ ಸೇರಿದಂತೆ ಬೇರೆ ಬೇರೆ ದೇಶಗಳಿಂದ ರೇಷ್ಮೆ ಆಮದು ಆಗುತ್ತದೆ. ಹೀಗಾಗಿ ರಾಜ್ಯದ ಉತ್ಪನ್ನಕ್ಕೆ ದರ ಕುಸಿಯುವ ಸಾಧ್ಯತೆ ಇದ್ದು, ಈ ಬಗ್ಗೆಯೂ ಸರಕಾರ ಸೂಕ್ತ ಕ್ರಮ ವಹಿಸಲಾಗಿದೆ ಎಂದರು.

ರೇಷ್ಮೆ ಆಮದು ಮಿತಿ ಹೇರುವ ಸಂಬಂಧ ಕೇಂದ್ರ ಸರಕಾರದೊಂದಿಗೆ ಸಮಾಲೋಚನೆ ನಡೆಸಲಾಗುವುದು. ಹೊರ ರಾಜ್ಯಗಳಿಗೆ ರೇಷ್ಮೆ ಸಾಗಿಸಲು ವಾಹನಗಳಿಗೆ ಪಾಸ್ ನೀಡಲಾಗುವುದು. ಈಗಾಗಲೇ ಕೋರಿಯರ್ ಸೇವೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಆಯುಕ್ತೆ ಶೈಲಜಾ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಹಾಗೂ ರೇಷ್ಮೆ ರೀಲರ್ಸ್‍ಗಳು ಮತ್ತು ಟ್ರೇಡರ್‍ಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News