ಕಬ್ಬಿನಿಂದ ಸ್ಯಾನಿಟೈಸರ್ ಉತ್ಪಾದಿಸಲು ಪ್ರಧಾನಿಗೆ ಒತ್ತಾಯಿಸಲು ಸಚಿನ್ ಮೀಗಾ ಮನವಿ

Update: 2020-05-09 18:12 GMT
ಸಚಿನ್ ಮೀಗಾ

ಬೆಂಗಳೂರು, ಮೇ 9: ತಿನ್ನುವ ಅಕ್ಕಿ ಬದಲಿಗೆ ಕಬ್ಬಿನಿಂದ ಸ್ಯಾನಿಟೈಸರ್ ಉತ್ಪಾದಿಸಲು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಲು ಕೋರಿ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಬಡವರಿಗೆ ನೀಡಬೇಕಾದ ಅತ್ಯವಶ್ಯಕವಾಗಿ ದಾಸ್ತಾನಿರುವ ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸಲು ಮುಂದಾಗಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಹೆಜ್ಜೆ ಅಸಂಬದ್ಧ, ಅವೈಜ್ಞಾನಿಕ ಹಾಗೂ ದೂರದೃಷ್ಟಿತ್ವ ಇಲ್ಲದ ಕಾರ್ಯ. ಕಬ್ಬಿನಿಂದ ಸ್ಯಾನಿಟೈಸರ್ ತಯಾರಿಸಬಹುದಾಗಿದ್ದು, ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದು ಆಗ್ರಹಿಸಬೇಕು ಎಂದು ಸಚಿನ್ ಮೀಗಾ ಕೋರಿದ್ದಾರೆ.

ಕೊರೋನ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಬ್ಬು ಬೆಳೆಗಾರರನ್ನು ಇದರಿಂದ ಉತ್ತೇಜಿಸಿದಂತೆ ಆಗುತ್ತದೆ. ಜೊತೆಗೆ ಕ್ಯಾರೆಟ್, ಆಲೂಗಡ್ಡೆ, ಗೆಣಸು ಇತ್ಯಾದಿಗಳಿಂದಲೂ ಸ್ಯಾನಿಟೈಸರ್ ಉತ್ಪಾದಿಸಬಹುದಾಗಿದ್ದು, ಈ ಬಗ್ಗೆ ಕೇಂದ್ರ ಸರಕಾರ ಸಂಶೋಧನೆ ನಡೆಸಬೇಕು. ಇದರಿಂದ ತರಕಾರಿ ಬೆಳೆಗಳಿಗೂ ಉತ್ತೇಜನ ನೀಡಿದಂತೆ ಆಗುತ್ತದೆ. ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸುವುದು ಮೂರ್ಖತನದ್ದು. ಮುಂದೊಂದು ದಿನ ಆಹಾರ ಕೊರತೆಯಿಂದ ರಾಷ್ಟ್ರ ಇಕ್ಕಟ್ಟಿಗೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News