ತುಮಕೂರು: ಸಂಕಷ್ಟದಲ್ಲಿರುವ ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ

Update: 2020-05-10 10:26 GMT

ತುಮಕೂರು, ಮೇ.10: ಲಾಕ್‍ಡೌನ್‍ನಿಂದ ಕೆಲಸ ಇಲ್ಲದೆ ಸಂಕಷ್ಟದಲ್ಲಿರುವ ಸೀಲ್‍ಡೌನ್ ಆಗಿರುವ ನಗರದ 10ನೇ ವಾರ್ಡ್ ಪಿ.ಎಚ್. ಕಾಲನಿಯ ಬಡವರಿಗೆ ಸಮಾಜ ಸೇವಕರು ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಹಾಗೂ ಇನ್ನಿತರ ಮುಖಂಡರು ದಿನಸಿ ಪದಾರ್ಥಗಳ ಕಿಟ್‍ನ್ನು ಸಂಜೆ ವಿತರಿಸಿದರು.

ಪಡಿತರ ಕಿಟ್ ವಿತರಿಸಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ದವಸ ಧಾನ್ಯ ವಿತರಿಸುವ ಮೂಲಕ ಹಸಿದ ಹೊಟ್ಟೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಕಳೆದ 20 ದಿನಗಳಿಂದಲೂ ನಗರದ ವಿವಿಧ ಕಡೆ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಪಿ.ಎಚ್.ಕಾಲನಿಯಲ್ಲಿ ಸೋಂಕಿತ ವ್ಯಕ್ತಿ ಗುರುತಿಸಲ್ಪಟ್ಟಿದ್ದರಿಂದ 10ನೇ ವಾರ್ಡ್ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿತ್ತು.ಇದರಿಂದ ಸುಮಾರು 400 ಬಡ ಕುಟುಂಬಗಳು ದಿನನಿತ್ಯದ ಆಹಾರ ಪದಾರ್ಥಗಳ ಸಮಸ್ಯೆ ಎದುರಿಸುತ್ತಿದ್ದರು. ಇಂತಹ ಸಮಯದಲ್ಲಿ ನಾವು ಸಹಾಯ ಮಾಡಬೇಕೆಂಬ ದೃಷ್ಠಿಯನ್ನಿಟ್ಟುಕೊಂಡು ನಾನು 4 ಟನ್ ಅಕ್ಕಿ ನೀಡಿದ್ದು, ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಸೈಯದ್ ನಯಾಜ್ ಅವರು ಗೋದಿಹಿಟ್ಟು, ರವೆ, ತೊಗರಿಬೇಳೆ, ಅಡುಗೆ ಎಣ್ಣೆ ಮತ್ತಿತರೆ ಆಹಾರ ಪದಾರ್ಥಗಳನ್ನು ವಾರ್ಡಿನ ಬಡ ಕುಟುಂಬಗಳಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾಗಿರುವ ಬಡಕುಟುಂಬಗಳಿಗೆ ಆಹಾರ ಕೊರತೆ ಉಂಟಾಗದಂತೆ ಆಹಾರ ಪದಾರ್ಥ ಗಳನ್ನು ವಿತರಿಸಲಾಗುತ್ತಿದೆ. ಕಳೆದ 20 ದಿನಗಳಿಂದಲೂ ನಗರದ ಬಡ್ಡಿಹಳ್ಳಿ, ವೀರಸಾಗರ, ಸಂಪಾದನೆ ಮಠ ಕೊಳಗೇರಿ ನಿವಾಸಿಗಳ ಕಾಲೋನಿ, ಶ್ರೀರಾಮನಗರ ಸೇರಿದಂತೆ ತುಮಕೂರು ತಾಲೂಕಿನ ವಿವಿಧೆಡೆ ಇರುವ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಗಿದೆ ಎಂದರು.

ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಹಾಮಾರಿ ಕೊರೋನಾ ವಿರುದ್ಧ ಪ್ರತಿಯೊಬ್ಬರು ಜಾಗೃತೆ ವಹಿಸಬೇಕು ಮಾಸ್ಕ್ ಧರಿಸಿ, ಸೋಪ್ ಬಳಸಿ ಕೈಗಳನ್ನು ಶುಭ್ರವಾಗಿ ತೊಳೆಯುತ್ತಿರಬೇಕು, ಸ್ವಚ್ಚತೆಗೆ ಆಧ್ಯತೆ ನೀಡಬೇಕು ಎಂದ ಅವರು, ತಮ್ಮ ನೆರೆಹೊರೆಯಲ್ಲಿ ಹೊಸದಾಗಿ ಬರುವವರ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದರ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಬೇಕೆಂದು ಇಕ್ಬಾಲ್ ಅಹಮದ್ ಸಲಹೆ ನೀಡಿದರು.

ಮಹಾನಗರಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸೈಯದ್ ನಯಾಜ್ ಮಾತನಾಡಿ, ಕೊರೋನ ಸೋಂಕು ತಡೆಗೆ ಶ್ರಮಿಸುತ್ತಿರುವ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯ ಸಮಾಜಕ್ಕೆ ಶ್ಲಾಘನೀಯ. ಜನರು ಲಾಕ್‍ಡೌನ್ ಕ್ರಮ ಬೆಂಬಲಿಸಿ ಕೊರೋನ ನಿಗ್ರಹಿಸಲು ಸಹಕಾರ ನೀಡುವಂತೆ ಮನವಿ ಮಾಡಿದ ಅವರು,ತುಮಕೂರು ಜಿಲ್ಲೆ ಪ್ರಸ್ತುತ ಆರೆಂಜ್ ಝೋನ್‍ನಲ್ಲಿದ್ದು, ಕೊರೋನ ಮುಕ್ತ ಹಸಿರು ಜಿಲ್ಲೆಯನ್ನಾಗಿಸಲು ನಾಗರಿಕರು ವೈರಸ್ ವಿರುದ್ಧ ಜಾಗೃತೆ ವಹಿಸಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸೈಯದ್ ಫಯಾಜ್, ನಿಸಾರ್ ಅಹಮದ್, ಜೀಲಾನ್, ಶಹಬುದ್ದೀನ್, ಇರ್ಫಾನ್, ಶರ್ಫು ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News