×
Ad

ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆ: ಒಟ್ಟು 422 ಮಂದಿ ಗುಣಮುಖ

Update: 2020-05-10 17:40 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ.10: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿದ್ದು, ಶನಿವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆ ವರೆಗಿನ ಅವಧಿಯಲ್ಲಿ ಒಟ್ಟು 54 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿವೆ. ಅಲ್ಲದೇ, ಮೇ.7 ರಂದು ಮೃತಪಟ್ಟಿದ್ದ ಬೆಂಗಳೂರು ನಗರದ 56 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿರುವ ಬುಲೆಟಿನ್ ‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆಯಾಗಿದೆ. ಈ ಪೈಕಿ ಇಂದು 31 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸೋಂಕಿತರ ಪೈಕಿ ಬೆಳಗಾವಿಯಲ್ಲಿ 22, ಶಿವಮೊಗ್ಗದಲ್ಲಿ 8, ಬಾಗಲಕೋಟೆಯಲ್ಲಿ 8, ಭಟ್ಕಳದಲ್ಲಿ 7, ಬೆಂಗಳೂರು ನಗರ 3, ಕಲಬುರಗಿ 4, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಂದೊಂದು ಸೋಂಕು ಪ್ರಕರಣ ಪತ್ತೆಯಾಗಿದೆ.

ಬಾಗಲಕೋಟೆಯ 2 ವರ್ಷದ ಹೆಣ್ಣು ಮಗು, 8 ವರ್ಷದ ಬಾಲಕ, ಬೆಳಗಾವಿಯಲ್ಲಿ 3 ವರ್ಷದ ಇಬ್ಬರು ಮತ್ತು, 6 ಹಾಗೂ 8 ವರ್ಷದ ಮಕ್ಕಳು, 12 ಮತ್ತು 14 ವರ್ಷದ ಬಾಲಕರಿಗೆ ಕೊರೋನ ಪಾಸಿಟಿವ್ ಬಂದಿದೆ.

ರಾಜ್ಯದ ಒಟ್ಟು 847 ಸೋಂಕಿತರ ಪೈಕಿ 422 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 31 ಮಂದಿ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 8 ಕೊರೋನ ಪಾಸಿಟಿವ್

ಇದುವರೆಗೆ ಒಂದೇ ಒಂದು ಕೊರೋನ ಸೋಂಕು ಪ್ರಕರಣ ಪತ್ತೆಯಾಗದೇ ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಒಂದೇ ದಿನ 8 ಕೊರೋನ ಪ್ರಕರಣಗಳು ಪಾಸಿಟಿವ್ ಬಂದಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಈ ಪೈಕಿ ಶಿಕಾರಿಪುರದ 7 ಮಂದಿ ಹಾಗೂ ತೀರ್ಥಹಳ್ಳಿಯ ಒಬ್ಬರಿಗೆ ಕೊರೋನ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಅಹಮದಾಬಾದ್‌ನಿಂದ ಬಂದಿದ್ದ ಒಂಭತ್ತು ಮಂದಿಯ ಪೈಕಿ ಶಿಕಾರಿಪುರದ ಏಳು ಮಂದಿ ಹಾಗೂ ತೀರ್ಥಹಳ್ಳಿಯ ಒಬ್ಬರಿಗೆ ಕೊರೋನ ಪಾಸಿಟಿವ್ ಬಂದಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News